ತಾಕತ್ತಿದ್ದರೆ ತಂಗಡಗಿ ಪದಚ್ಯುತಿಗೊಳಿಸಿ: ರೆಡ್ಡಿ ಶ್ರೀನಿವಾಸ

KannadaprabhaNewsNetwork | Published : Apr 12, 2024 1:02 AM

ಸಾರಾಂಶ

ತಾಕತ್ತಿದ್ದರೆ ಶಿವರಾಜ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥಗೆ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸವಾಲು ಹಾಕಿದ್ದಾರೆ.

ವಿಪ ಮಾಜಿ ಸದಸ್ಯ ಶ್ರೀನಾಥಗೆ ರೆಡ್ಡಿ ಶ್ರೀನಿವಾಸ ಸವಾಲು

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಕತ್ತಿದ್ದರೆ ಶಿವರಾಜ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥಗೆ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸವಾಲು ಹಾಕಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವರಾಜ ತಂಗಡಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳು ಕಾಂಗ್ರೆಸ್ಸಿಗೆ ಬಂದಿವೆ. ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರ ಹಿತವನ್ನು ಬಯಸುವ ತಂಗಡಿಯವರನ್ನು ಏಕಾಏಕಿ ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎನ್ನುವುದು ಏಕೆ? ಸಚಿವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದು, ಈಗಲೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಕಾರಣವಿಲ್ಲದೆ ಸಚಿವರನ್ನು ಪದಚ್ಯುತಿಗೊಳಿಸುವ ಹೇಳಿಕೆಯನ್ನು ಶ್ರೀನಾಥ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ ಮಾತನಾಡಿ, ಯಾವುದೋ ವಿಚಾರಕ್ಕಾಗಿ ತಂಗಡಗಿಯವರನ್ನು ಅವಮಾನಿಸುವುದಾಗಲಿ ಅಥವಾ ರಾಜಕೀಯ ಪ್ರತಿಷ್ಠೆಗಾಗಿ ದ್ವೇಷಿಸುವುದು ಸರಿಯಲ್ಲ. ತಂಗಡಗಿ ಕನಕಗಿರಿಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ತೋರಿಸಿದ್ದಾರೆ. ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ಮುಂದುವರೆದರೆ ಶ್ರೀನಾಥರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

ಮುಖಂಡರಾದ ವೀರೇಶ ಸಮಗಂಡಿ, ಶರಣಪ್ಪ ಭತ್ತದ, ರಮೇಶ ನಾಯಕ ಹುಲಿಹೈದರ, ಬಸವಂತಗೌಡ, ಹಜರತ್‌ಹುಸೇನ, ರಾಮಣ್ಣ ಆಗೋಲಿ, ನೀಲಕಂಠ ಬಡಿಗೇರ, ರಾಜಸಾಬ ನಂದಾಪೂರ, ರವಿಶಂಕರ ಪಾಟೀಲ್ ಸೇರಿದಂತೆ ಇತರರಿದ್ದರು.

ಅಭಿವೃದ್ಧಿಪಡಿಸಲಿ:

ಆನೆಗೊಂದಿ ಉತ್ಸವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರಿಂದಾಗಿದೆಯೇ ಹೊರತು ಜನಾರ್ದನರೆಡ್ಡಿ ಅವರಿಂದಲ್ಲ. ರೆಡ್ಡಿ ಬಾಯಿ ಚಪಲ ತೀರಿಸಿಕೊಳ್ಳಲು ಸಚಿವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ ಎಂದು ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್ ತಿಳಿಸಿದ್ದಾರೆ.

Share this article