ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಶಿವಲಿಂಗ ಮಹಾಸ್ವಾಮಿಗಳ 139ನೇ ವರ್ಷದ ಸ್ಮರಣಾರಾಧನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಸಾಧು-ಸಂತರ ಮನಸ್ಸು ನೋಯಿಸಿದವರ ಜೀವನದಲ್ಲಿ ಶಾಂತಿ ಇರುವುದಿಲ್ಲ. ಅಂತಹ ಪಾಪವು ವಂಶಪಾರಂಪರ್ಯವಾಗಿ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು. ಸಾಧುಸಂತರಿಗೆ, ಮಠಗಳಿಗೆ, ಗುರುಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ಕೇವಲ ವ್ಯಕ್ತಿಯ ಮೇಲಲ್ಲ, ಅವನ ವಂಶದ ಮೇಲೆಯೇ ಪರಿಣಾಮ ಬೀರುತ್ತದೆ. ಗುರುನನ್ನು ಗೌರವಿಸುವ ಮನೋಭಾವವೇ ಮಾನವನನ್ನು ರಕ್ಷಿಸುತ್ತದೆ. ‘ಹರ ಮುನಿದರೂ ಗುರು ಕಾಯುವನು’ ಎಂಬ ಮಾತಿನ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪದೇಶಿಸಿದರು. ಕೋಡಿಮಠ ಯಾವುದೇ ಜಾತಿ, ಧರ್ಮ ಅಥವಾ ಪಂಥಕ್ಕೆ ಸೀಮಿತವಾಗಿಲ್ಲ. ಸರ್ವಧರ್ಮ ಸಮಭಾವದ ಸಂದೇಶವನ್ನು ಸಾರುವ ಈ ಮಠ, ಎಲ್ಲ ಭಕ್ತರನ್ನು ಸಮಾನವಾಗಿ ಆಶೀರ್ವದಿಸುತ್ತದೆ ಎಂದು ಹೇಳಿದರು.
ಹಂದಿಗೂಡು ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಬಸವಣ್ಣರು ಅನುಭವ ಮಂಟಪದ ಮೂಲಕ ಸಮಾನತೆಯ ಸಂದೇಶ ಸಾರಿದರೆ, ಇಂದಿನ ಕಾಲದಲ್ಲಿ ಕೋಡಿಮಠದ ಶ್ರೀಗಳು ಅದೇ ತತ್ವವನ್ನು ಜಾತ್ಯತೀತವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಕೆಲವರು ಮಾತನಾಡಿದರೆ ಕರ್ನಾಟಕ ನೋಡುತ್ತದೆ, ಕೆಲವರು ಮಾತನಾಡಿದರೆ ಭಾರತ ನೋಡುತ್ತದೆ, ಆದರೆ ಕೆಲವರ ಮಾತು ವಿಶ್ವದ ಗಮನ ಸೆಳೆಯುತ್ತದೆ, ಆ ಪಟ್ಟಿಯಲ್ಲಿ ಕೋಡಿಮಠ ಶ್ರೀಗಳೂ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಸವಣ್ಣನಂತಹ ಮಹನೀಯರನ್ನೇ ಟೀಕಿಸಿದ ಸಮಾಜದಲ್ಲಿ, ಇತರರ ಬಗ್ಗೆ ಮಾತನಾಡುವುದನ್ನು ಬಿಡುವುದಿಲ್ಲ. ಆದರೂ ಧರ್ಮದ ದಾರಿಯಲ್ಲಿ ನಡೆದು ಸಮಾಜಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ ಎಂದರು.ಮೂಲ ಸ್ವರ್ಣಗೌರಮ್ಮ ದೇವಿಯ ಮಹಿಮೆ ಕುರಿತು ಮಾತನಾಡಿದ ಅವರು, ದೇವಿಯ ಅನುಗ್ರಹದಿಂದ ನಿರ್ಮಾಣವಾಗುತ್ತಿರುವ ಈ ನೂತನ ದೇವಾಲಯ ಭವಿಷ್ಯದಲ್ಲಿ ದೇಶದ 18 ಶಕ್ತಿಪೀಠಗಳಂತೆ 19ನೇ ಶಕ್ತಿಪೀಠವಾಗಿ ಬೆಳೆಯಲಿದೆ. ಸಂಕಷ್ಟದಲ್ಲಿ ಬರುವ ಭಕ್ತರಿಗೆ ಜಗನ್ಮಾತೆ ಸ್ವರ್ಣಗೌರಮ್ಮ ದೇವಿ ಆಶ್ರಯವಾಗುವಳು ಎಂದು ವಿಶ್ವಾಸ ವ್ಯಕ್ತಪಡಿಸಿದರು.