ಹಿರೇಕೆರೂರು: ಕಳೆದ ಎರಡು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಳ್ಳಿನ ಭರವಸೆಗಳಿಗೆ ಮೋಸ ಹೋಗಿರುವ ಮತದಾರರು ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಈಗ ಮತ್ತೆ ತಪ್ಪು ಮಾಡಿದರೆ ಐದು ವರ್ಷ ಮತ್ತೆ ಪರಿತಪಿಸಬೇಕಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಹಿರೇಕೆರೂರ ತಾಲೂಕಿನ ಕೋಡ ಗ್ರಾಮದಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಅವಕಾಶ ನೀಡಿದರೂ ರೈತರ ಬೆಳೆಗೆ ಬೆಲೆ ದ್ವಿಗುಣಗೊಳ್ಳಲಿಲ್ಲ. ಸ್ವಿಸ್ ಬ್ಯಾಂಕಿನ ಹಣ ಜನತೆಯ ಖಾತೆಗೆ ಜಮಾ ಆಗಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿಲ್ಲ. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಕೇವಲ ಭಾವನಾತ್ಮಕ ಸಂಗತಿಗಳನ್ನು ಸೃಷ್ಟಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಇದ್ದ ಪೆಟ್ರೋಲ್ ಬೆಲೆ, ದಿನಸಿ ವಸ್ತುಗಳ ಬೆಲೆಯನ್ನು ಈಗ ತಾಳೆ ಮಾಡಿ ನೋಡಿದರೆ ಸತ್ಯಾಸತ್ಯತೆ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿದ ಬಳಿಕ ಇಪ್ಪತ್ತೈದು ಗ್ಯಾರಂಟಿ ಜಾರಿಗೆ ಭರವಸೆ ನೀಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಗ್ಯಾರಂಟಿ ಯೋಜನೆಗಳನ್ನು ಸ್ವೀಕರಿಸಬೇಕೆಂದು ಹೇಳಿದರು.ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ನಿಮ್ಮ ಮನೆಯ ಮಗನಂತಿರುವ ನನಗೆ ಒಂದು ಬಾರಿ ಅವಕಾಶ ನೀಡಿ. ತಮ್ಮ ಮಧ್ಯೆ ಇದ್ದು ಸಮಸ್ಯೆಗಳಿಗೆ ಧ್ವನಿಯಾಗುವೆ. ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆ ಬದುಕು ಮತ್ತು ಭಾವನ ಮಧ್ಯೆ ನಡೆಯುತ್ತಿದೆ. ಬದುಕನ್ನು ಸಶಕ್ತಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಕೇವಲ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಪ್ರಜ್ಞಾವಂತ ಮತದಾರರು ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಹೇಳಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಕೋಡ ಗ್ರಾಮದ ವೀರಭದ್ರಗೌಡ ಕಬ್ಬಕ್ಕಿ, ಗೋಣೆಪ್ಪ ಕೆಳಗೇರಿ, ದುರಗಪ್ಪ ನೀರಲಗಿ, ಕವಿತಾ ಬಿದರಿ, ಈರಪ್ಪ ಗೋಣಿಮಠ, ರಾಮಚಂದ್ರಪ್ಪ ಲಂಕೆಪ್ಪನವರ, ಶೇಖಪ್ಪ ಉಕ್ಕುಂದ ಇದ್ದರು.