ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದಲ್ಲಿ ಶುಕ್ರವಾರ 5 ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಿದ್ಧತೆ ಕುರಿತು ನಗರ ಶಾಸಕರೊಂದಿಗೆ ಡಿ.ಕೆ. ಶಿವಕುಮಾರ್ ಅವರು ಸಭೆ ನಡೆಸಿದರು.
ಎಲ್ಲ 5 ನಗರ ಪಾಲಿಕೆಗಳಿಗೂ ತಲಾ 2 ಟೋಯಿಂಗ್ ವಾಹನ ನೀಡಲಾಗಿದ್ದು, ಪೊಲೀಸರ ಸಹಯೋಗದಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಮತ್ತು ವಾಹನ ನಿಲುಗಡೆ ನಿಷೇಧಿತ ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳನ್ನು ಟೋ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ಯಾವ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು, ಎಲ್ಲೆಲ್ಲೆ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಪಟ್ಟಿ ಮಾಡಬೇಕು. ಅಲ್ಲದೆ, ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳ ಬದಿಯಲ್ಲಿ ಬೆಳಗ್ಗೆ 7ರಿಂದ 11 ಹಾಗೂ ಸಂಜೆ 4ರಿಂದ 8 ಗಂಟೆಯವರೆಗೆ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಪೊಲೀಸರು ಜಪ್ತಿ ಮಾಡಿರುವ ಹಳೇ ವಾಹನಗಳು ರಸ್ತೆ ಬದಿ ನಿಲ್ಲಿಸಿರುವುದೂ ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕರು ಹೇಳಿದರು. ಅದಕ್ಕೆ ಡಿ.ಕೆ. ಶಿವಕುಮಾರ್, ಪೊಲೀಸ್ ಠಾಣೆ ಮತ್ತು ರಸ್ತೆ ಬದಿ ತುಂಬಾ ಸಮಯಗಳ ಕಾಲ ನಿಲ್ಲಿಸುವ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅದಕ್ಕಾಗಿ ನಾಲ್ಕು ಕಡೆ ಜಾಗ ಗುರುತಿಸಲಾಗಿದ್ದು, ಗುಜರಿಯಾಗಿರುವ ವಾಹನಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುವಂತೆಯೂ ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯ 5 ನಗರ ಪಾಲಿಕೆಗಳಲ್ಲಿನ ಹಳೇ ವಾರ್ಡ್‌ಗಳಿಗೆ ತಲಾ 5 ಕೋಟಿ ರು. ಹಾಗೂ ಹೊಸ ವಾರ್ಡ್‌ಗಳಿಗೆ ತಲಾ 10 ಕೋಟಿ ರು. ಅನುದಾನ ನೀಡುವಂತೆ ನಗರದ ಶಾಸಕರು ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಶಾಸಕರು ವಾರ್ಡ್‌ವಾರು ನೀಡುವ ಅನುದಾನ ಹೆಚ್ಚಿಸುವಂತೆ ಕೋರಿದ್ದಾರೆ, ಸದ್ಯ ಹಳೇ ವಾರ್ಡ್‌ಗೆ ತಲಾ 2 ಕೋಟಿ ರು. ಹಾಗೂ ಹೊಸ ವಾರ್ಡ್‌ಗಳಿಗೆ ತಲಾ 3 ಕೋಟಿ ರು. ನೀಡಲಾಗುತ್ತಿದೆ. ಆದರೆ, ಈ ಮೊತ್ತ ಸಾಲುವುದಿಲ್ಲ. ಹೀಗಾಗಿ ಹಳೇ ವಾರ್ಡ್‌ಗಳಿಗೆ ತಲಾ 5 ಕೋಟಿ ರು. ಹಾಗೂ ಹೊಸ ವಾರ್ಡ್‌ಗಳಿಗೆ ತಲಾ 10 ಕೋಟಿ ರು. ಅನುದಾನ ನೀಡಬೇಕು ಎಂದು ಕೋರಿದರು.ಡಾಂಬರೀಕರಣ ಸ್ಥಗಿತದ ದೂರು: ರಸ್ತೆ ದುರಸ್ತಿಗೆ ಸರ್ಕಾರ ಒತ್ತು ನೀಡಲಾಗಿದೆಯಾದರೂ, ಸದ್ಯ ಗುತ್ತಿಗೆದಾರರು ಡಾಂಬರೀಕರಣ ಸ್ಥಗಿತಗೊಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಡಾಂಬರೀಕರಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದು ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದು, ಗುತ್ತಿಗೆದಾರರನ್ನು ಕರೆಸಿ ಮಾತನಾಡುವಂತೆ ಶಾಸಕರು ಮನವಿ ಮಾಡಿದರು.
ಎಲ್ಲೆಡೆ ಇ-ಖಾತಾ ಮೇಳ: ಇ-ಖಾತಾ ಪಡೆಯುವಲ್ಲಾಗುತ್ತಿರುವ ಸಮಸ್ಯೆಗಳನ್ನು ಶಾಸಕರು ವಿವರಿಸಿದರು. ಚುನಾವಣೆ ಇರುವ ಕಾರಣ ಇ-ಖಾತಾ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಕೋರಿದರು. ಅದಕ್ಕೆ ಡಿ.ಕೆ. ಶವಕುಮಾರ್, ಇ-ಖಾತಾ ವಿತರಣೆಗಾಗಿ ಪಾಸ್‌ಪೋರ್ಟ್ ಕೇಂದ್ರದ ರೀತಿ ಕೇಂದ್ರಗಳನ್ನು ತೆರೆಯುತ್ತೇವೆ. ಅಲ್ಲದೆ, ವಾರ್ಡ್‌ವಾರು ಅಥವಾ ವಿಭಾಗವಾಗಿ ಇ-ಖಾತಾ ಮೇಳ ಮಾಡಲಾಗುವುದು. ಮೇಳದಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅಲ್ಲಿಯೇ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಅದಕ್ಕೆ, ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ ಮೌದ್ಗಿಲ್ ಅವರು, ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಸಂಬಂಧ ಹೊಸ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಅದು ಪೂರ್ಣಗೊಂಡು ಸೇವೆ ಲಭ್ಯವಾಗಲಿದೆ. ಅದರ ಜತೆಗೆ ಖಾತಾ ವಿಂಗಡಣೆಯಲ್ಲಿನ ಸಮಸ್ಯೆಯನ್ನು ನಿವಾರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಚುನಾವಣೆ ಮಾಡಿಯೇ ಮಾಡುತ್ತೇವೆ:ಡಿಕೆಸಭೆಯಲ್ಲಿ ನಗರ ಪಾಲಿಕೆಗಳ ಚುನಾವಣೆ ಕುರಿತಂತೆ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಸೋಲು ಅಥವಾ ಗೆಲುವು ಏನೇ ಇರಲಿ ನಾವು 5 ನಗರ ಪಾಲಿಕೆಗಳ ಚುನಾವಣೆಯನ್ನು ಮಾಡಿಯೇ ಮಾಡುತ್ತೇವೆ. ಅದಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ. ಆದರೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಗೊಂದಲವಿದ್ದು, ಅದನ್ನು ಸರಿಪಡಿಸುವಂತೆ ಚುನಾವಣಾ ಆಯೋಗಕ್ಕೆ ಕೋರಲಾಗಿದೆ. ಇನ್ನು ಎಲ್ಲ ಪಕ್ಷಗಳ ಬಿಎಲ್‌ಒಗಳು ಕೂಡ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪತ್ತೆ ಮಾಡಬೇಕು. ಅದನ್ನು ಚುನಾವಾಣ ಆಯೋಗದ ಗಮನಕ್ಕೆ ತರಬೇಕು ಎಂದರು.ಒಟ್ಟು 16 ಸಾವಿರ ಕೋಟಿ ಬಜೆಟ್?
ಐದೂ ನಗರ ಪಾಲಿಕೆಗಳ ಬಜೆಟ್ ಒಟ್ಟಾರೆ 16 ಸಾವಿರ ಕೋಟಿ ರು. ತಲುಪುವ ಸಾಧ್ಯತೆಗಳಿವೆ. ಐದು ಪಾಲಿಕೆಗಳ ಪೈಕಿ ಪ್ರತಿ ಪಾಲಿಕೆಯೂ ಪ್ರತ್ಯೇಕ ಬಜೆಟ್ ಮಂಡಿಸಲಿವೆ. ಅದರಲ್ಲಿ ಒಂದು ಪಾಲಿಕೆ ಕನಿಷ್ಠ 2,500 ಕೋಟಿ ರು. ಆಸುಪಾಸಿನಲ್ಲಿ ಬಜೆಟ್ ಸಿದ್ಧಪಡಿಸಿದರೆ, ಗರಿಷ್ಠ 4500 ಕೋಟಿ ರು. ಮೊತ್ತದ ಬಜೆಟ್ ಮಂಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಐದೂ ಪಾಲಿಕೆಗಳ ಬಜೆಟ್ ಗಾತ್ರ 16 ಸಾವಿರ ಕೋಟಿ ರು. ಆಸುಪಾಸಿನಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ.