ಕುಮಟಾ: ಪಟ್ಟಣದ ನಾಮಧಾರಿ ಸಭಾಭವನದ ಆವರಣದಲ್ಲಿರುವ ವೆಂಕಟರಮಣ, ಶ್ರೀದೇವಿ ಮತ್ತು ಭೂದೇವಿ ದೇವಸ್ಥಾನದಲ್ಲಿ ಮೇ ೧೧ರಿಂದ ಮೇ ೧೩ರ ವರೆಗೆ ಹಮ್ಮಿಕೊಂಡಿದ್ದ ವರ್ಧಂತಿ ಉತ್ಸವ, ದೇವರಿಗೆ ಬೆಳ್ಳಿ ಕವಚ ಸಮರ್ಪಣೆ, ಜೀರ್ಣಾಷ್ಟಬಂಧ ಮತ್ತು ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ನಾಮಧಾರಿ ಆರ್ಯ ಈಡಿಗ ನಾಮಧಾರಿ ಸಮಾಜ ಸಂಘಟನೆಯ ಮುಂದಾಳತ್ವದಲ್ಲಿ ಸೋಮವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಯಾವುದೇ ಸಮಾಜ ತಾನು ಬೆಳೆಯುತ್ತಿದ್ದಂತೆ ಇತರ ಸಮಾಜಗಳಿಗೂ ಬೆಳೆಯುವಲ್ಲಿ ಸಹಯೋಗ ನೀಡಿದರೆ ಸಮಾಜದಲ್ಲಿ ಸಾಮರಸ್ಯ ಸಾರಿದಂತಾಗುತ್ತದೆ. ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಸಂಘಟನೆಗಳೊಟ್ಟಿಗೆ ಸಕ್ರಿಯರಾಗಿರಬೇಕು ಎಂದು ಶ್ರೀಗಳು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ವಕೀಲ ಆರ್.ಜಿ. ನಾಯ್ಕ ಅವರು, ಸಮಾಜದ ಸಂಘಟನೆಯಲ್ಲಿ ಕೊರತೆ ಕಾಣುತ್ತಿದೆ. ಯುವ ಸಮುದಾಯ ಸಂಘಟನೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು. ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ ಸಮಾಜ ಬಲಪಡಿಸಬೇಕು ಎಂದರು.ಶ್ರೀಗಳ ಪಾದಪೂಜೆ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ಸಮಾಜದಲ್ಲಿ ಸಂಘಟನಾತ್ಮಕ ಭಾವ ವ್ಯಾಪಕವಾಗಿ ಬೆಳೆದಿಲ್ಲ. ಸಭಾಭವನದ ಮೇಲಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ದಿ. ಡಾ. ಎಂ.ಡಿ. ನಾಯ್ಕರ ಪುತ್ಥಳಿ ನಿರ್ಮಿಸುವ ಚಿಂತನೆ ನಡೆದಿದೆ. ಈ ಎಲ್ಲ ಕಾರ್ಯಕ್ಕೆ ಸಮಾಜದವರು ಸಹಕಾರ ನೀಡಬೇಕು ಎಂದರು.
ಅರ್ಚಕ ವಿಷ್ಣುಮೂರ್ತಿ ಭಟ್, ಕೆಲಸಗಾರ ಮಾಸ್ತಿ ಗೌಡ, ಕಟ್ಟಡ ಕಾಮಗಾರಿ ಉಸ್ತುವಾರಿ ಗಣೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಪ್ರಮೋದ ನಾಯ್ಕ ನಿರೂಪಿಸಿದರು.