ಕನ್ನಡಪ್ರಭವಾರ್ತೆ ಹೊಳಲ್ಕೆರೆ
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಹಾಗಂತ ಕೂಲಿ ಕೆಲಸ ಅರಸಿಕೊಂಡು ಯಾರೂ ಕೂಡ ಮುಂದಿನ ಊರಿಗೆ ಗುಳೇ ಹೋಗಬೇಡಿ. ನರೇಗಾ ಯೋಜನೆಯಡಿ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ಕೊಟ್ಟು, ಸಕಾಲದಲ್ಲಿಯೇ ಕೂಲಿ ಹಣ ನೀಡುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜೆ ಸೋಮಶೇಖರ್ ಹೇಳಿದರು.ಹೊಳಲ್ಕೆರೆ ತಾಲೂಕು ಹಿರೇ ಎಮ್ಮಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಲ್ಯಾಣಿ ಅಭಿವೃದ್ಧಿ, ಗ್ರಾಮೀಣ ಉದ್ಯಾನವನ, ಚರಂಡಿ, ರಸ್ತೆ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿ, ಬಳಿಕ ಮಾತನಾಡಿದ ಅವರು, ಮಳೆಯ ಕೊರತೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೆ ನರೇಗಾ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದೇವೆ. ಉದ್ಯೋಗವನ್ನು ಅರಸಿಕೊಂಡು ಯಾರೂ ಕೂಡ ಗುಳೇ ಹೋಗಬಾರದು, ತಮ್ಮ ತಮ್ಮ ಗ್ರಾಮಗಳಲ್ಲಿಯೇ ನರೇಗಾದಡಿ ನೀಡುವ ಉದ್ಯೋಗವನ್ನು ನೀಡುತ್ತೇವೆ. ಕೆಲಸ ಅಗತ್ಯವಿರುವವರು ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಉದ್ಯೋಗದ ಬಗ್ಗೆ ಖಚಿತಪಡಿಸಬೇಕು. ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ನೀಡುತ್ತೇವೆ ಎಂದರು
ಗ್ರಾಮೀಣ ಭಾಗದ ಮಹಿಳಾ ಕೂಲಿಕಾರರು ಹೆಚ್ಚು ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು, ಬರ ಪರಿಸ್ಥಿತಿಯಲ್ಲಿಯೇ ಆರ್ಥಿಕವಾಗಿ ಸದೃಢರಾಗಬೇಕು. ಅಧಿಕಾರಿಗಳು ನರೇಗಾ ಯೋಜನೆ ಅನುಷ್ಠಾನಗೊಳಿಸುವಾಗ 60:40 ಅನುಪಾತವನ್ನು ತಪ್ಪದೆ ಪಾಲಿಸಬೇಕು. ಈ ಮೂಲಕ ಇನ್ನೂ ಹೆಚ್ಚು ಉತ್ತಮ ಗುಣಮಟ್ಟದ ಆಸ್ತಿಗಳ ಸೃಜನೆ ಮಾಡಬೇಕು ಎಂದು ಸಿಇಒ ಸೋಮಶೇಖರ್ ಹೇಳಿದರು.ನಂತರ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ವಹಿಸುತ್ತಿರುವ ಕೂಸಿನ ಮನೆಗೆ ಭೇಟಿ ನೀಡಿದ ಅವರು, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ವಿತರಣೆ ಆಗಬೇಕು. ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸಬೇಕು. ಮಕ್ಕಳ ಆರೋಗ್ಯವನ್ನು ತುಂಬಾ ಜಾಗರೂಕತೆಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವಂತೆ ನಿರ್ವಾಹಕರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 7 ಗ್ರಾಮಗಳಿದ್ದು ಕಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಸಿಇಒ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಿಇಒ ಸೋಮಶೇಖರ್, ಅತ್ಯಂತ ತುರ್ತಾಗಿ ಸ್ಥಳೀಯ ಖಾಸಗಿ ಬೋರ್ ವೆಲ್ ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಿದರು.ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7000 ಸಾವಿರ ಜನಸಂಖ್ಯೆಯಿದ್ದು, 17 ಗ್ರಾಮ ಪಂಚಾಯಿತಿಯ ಸದಸ್ಯರಿದ್ದಾರೆ. ಹೀಗಾಗಿ ಈ ಗ್ರಾಮ ಪಂಚಾಯಿತಿಯನ್ನು ಗ್ರೇಡ್ 1 ಗ್ರಾಮ ಪಂಚಾಯಿತಿಯನ್ನಾಗಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಗ್ರಾಪಂ ಕಟ್ಟಡ 30 ವರ್ಷ ಹಳೆಯ ದಾಗಿದ್ದು, ಶಿಥಿಲವಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸದಸ್ಯರು ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಸದಸ್ಯರ ಶಿಫಾರಸ್ಸಿನಂತೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರು. ಅನುದಾನ ಬಳಕೆಗೆ ಅವಕಾಶವಿದ್ದು, ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದು, ಹೊಸ ಕಟ್ಟಡ ನಿರ್ಮಿಸಿಕೊಳ್ಳಲು ಸೂಚಿಸಿದರು. ಗ್ರಾಮದ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರೊಂದಿಗೆ ಮತ್ತು ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ವಾರ್ಷಿಕ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಸಂವಾದ ನಡೆಸಿದರು ಸಲಹೆ ನೀಡಿದರು.
ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪ್ರಕಾಶ್ ಎಸ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಸೇರಿದಂತೆ ನರೇಗಾ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯಲ್ಲಿ ಹಾಜರಿದ್ದರು.