ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಕೀರ್ತಿ: ಶಿವಶಂಕರ

KannadaprabhaNewsNetwork | Published : Jan 6, 2025 1:03 AM

ಸಾರಾಂಶ

ಸರ್ಕಾರಿ ಅಧಿಕಾರಿಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಮಾಜ ಅವರನ್ನು ಗುರುತಿಸುತ್ತದೆ. ಅವರಿಗೆ ಕೀರ್ತಿ ಮತ್ತು ಒಳ್ಳೆಯ ಹೆಸರು ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಮುನಿರಾಬಾದ್

ಸರ್ಕಾರಿ ಅಧಿಕಾರಿಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಮಾಜ ಅವರನ್ನು ಗುರುತಿಸುತ್ತದೆ. ಅವರಿಗೆ ಕೀರ್ತಿ ಮತ್ತು ಒಳ್ಳೆಯ ಹೆಸರು ಸಿಗುತ್ತದೆ ಎಂದು ನಿವೃತ್ತ ಅಧೀಕ್ಷಕ ಅಭಿಯಂತರ ಶಿವಶಂಕರ ಹೇಳಿದರು.

ಇಲ್ಲಿನ ಮುಖ್ಯ ಅಭಿಯಂತರ ಕಚೇರಿಯಲ್ಲಿ ಅವರಿಗಾಗಿ ಏರ್ಪಡಿಸಲಾಗಿದ್ದ ನಿವೃತ್ತಿ ನಂತರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು ಯಾವುದೇ ಊರಿಗೆ ವರ್ಗಾವಣೆ ಅದರೂ ಎದೆಗುಂದಬಾರದು. ವರ್ಗಾವಣೆ ಸರ್ಕಾರಿ ಅಧಿಕಾರಿಗಳ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.

500 ವರ್ಷಗಳ ಹಿಂದ ವಿಜಯನಗರ ಅರಸರು ಕಟ್ಟಿಸಿದ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿ ತಮ್ಮ ಅವಧಿಯಲ್ಲಿ ನಡೆದಿದ್ದು, ಇದು ತಮಗೆ ಸಂತಸ ತಂದಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವಾದ ಸಿರವಾರದ ವರೆಗೆ ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ ಹರಿಸಿದ ತೃಪ್ತಿ ತಮಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅಭಿಯಂತ ಹನುಮಂತಪ್ಪ ದಾಸರ ಮಾತನಾಡಿ, ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ನಿರ್ವಹಣೆ ಮಾಡುವುದು ಕಷ್ಟದ ಕೆಲಸ. ನಾಲ್ಕು ಜಿಲ್ಲೆಗಳಲ್ಲಿ (ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ) 10 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವುದು ಅಧಿಕಾರಿಗಳಿಗೆ ಒಂದು ದೊಡ್ಡ ಸವಾಲಾಗಿದೆ. ನಿವೃತ್ತ ಅಧೀಕ್ಷಕ ಅಭಿಯಂತ ಶಿವಶಂಕರ ಸಮರ್ಪಕವಾಗಿ ಈ ಕಾರ್ಯ ನಿರ್ವಹಿಸಿ ರೆತರ ಮೆಚ್ಚುಗೆಗೆ ಪಾತ್ರರಾದರು ಎಂದರು.

ಕೃಷ್ಣ ಮೇಲ್ದಂಡೆ ಯೋಜನೆಗಳಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದಿಂದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಈ ಕಾಲುವೆಗಳಲ್ಲಿ ನೀರು ತುಂಬಾ ವೇಗವಾಗಿ ಚಲಿಸುತ್ತದೆ. ಸರ್ಕಾರಿ ನೌಕರರು ಸಮಾಜಕ್ಕೆ ಉತ್ತಮ ಕೆಲಸ ಮಾಡಿ ಸರ್ಕಾರಕ್ಕೆ ಗೌರವ ತರಬೇಕು ಎಂದು ಹೇಳಿದರು.

ರಿಜಿಸ್ಟರ್ ಉಮೇಶ ಸಜ್ಜನರ ಸ್ವಾಗತಿ, ನಿರೂಪಿಸಿದರು. ಪರಮೇಶ್ವರಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಯೋಜನಾ ಶಾಖೆ ನೌಕರರ ಸಂಘದ ಅಧ್ಯಕ್ಷ ಬಸಪ್ಪ ಜಾನಕರ, ಅಧೀಕ್ಷಕ ಅಭಿಯಂತ ಬಸವರಾಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this article