ಧರ್ಮ ದೀಪದ ಬೆಳಕಿನಿಂದ ಅಜ್ಞಾನ ದೂರ: ರಂಭಾಪುರಿ ಶ್ರೀ

KannadaprabhaNewsNetwork | Published : Apr 1, 2025 12:46 AM

ಸಾರಾಂಶ

ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು.

ಹುಬ್ಬಳ್ಳಿ: ಮನುಷ್ಯ ಯಾವಾಗಲೂ ಆಶಾವಾದಿಯಾಗಿ ಬದುಕಬೇಕಲ್ಲದೇ ನಿರಾಶಾವಾದಿಗಳಾಗಬಾರದು. ಜೀವನದಲ್ಲಿ ಭರವಸೆ ಎಂಬ ದೀಪ ಎಂದಿಗೂ ಆರಬಾರದು. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಹೇಳಿದರು.

ಅವರು ತಾಲೂಕಿನ ತಿರುಮಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬರುವ ಜ. ರೇಣುಕ ಧರ್ಮ ನಿವಾಸದಲ್ಲಿ ಜ. ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಜ. ರೇಣುಕಾಚಾರ್ಯ ಮಹಾರಥೋತ್ಸವ ಅಂಗವಾಗಿ ಶನಿವಾರ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಸದ್ವಿದ್ಯೆ ಸಂಬಂಧ ಮತ್ತು ಸ್ನೇಹ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುತ್ತದೆ ಎಂಬ ಜ. ರೇಣುಕಾಚಾರ್ಯರ ಸತ್ಯ ಸಂದೇಶ ಮರೆಯಲಾಗದು ಎಂದರು.

ನೇತೃತ್ವ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರು ಮಾತನಾಡಿ, ಕಾಲು ಜಾರುವುದಕ್ಕಿಂತ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು. ಧರ್ಮ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕು ಎಂದರು.

ದಾನಯ್ಯ ದೇವರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ಗುರುಸಿದ್ಧಯ್ಯ ಹಿರೇಮಠ, ಯಲಿವಾಳದ ಶ್ರೀಕಂಠಗೌಡ ಹಿರೇಗೌಡ್ರ, ಸುರಶೆಟ್ಟಿಕೊಪ್ಪದ ಗಂಗಯ್ಯ ಸೇರಿದಂತೆ ಹಲವರಿದ್ದರು. ಏ. 1 ರಂದು ಪೂಲ್ ಬೇಡಾ- ಕೂಲ್ ಮಾಡೋಣ ಅಭಿಯಾನ

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಎಸ್.ಇ.ಆರ್.ಟಿ. ಸಹಯೋಗದಲ್ಲಿ ಇಂಡಿಯಾ ಫಾಂಡೇಶನ್ ಫಾರ್ ಆರ್ಟ್ಸ್, ಕಲಿ- ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ಅಂಗವಾಗಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಏ. 1ರಂದು ಪೂಲ್ ಬೇಡಾ- ಕೂಲ ಮಾಡೋಣ ಅಭಿಯಾನವನ್ನು 6 ರಿಂದ 9ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 10 ರಿಂದ ಆರಂಭವಾಗುವ ಈ ಅಭಿಯಾನದ ಚಟುವಟಿಕೆಗಳು ಪಕ್ಷಿಗಳಿಗೆ ಗೂಡು ತಯಾರಿಸುವುದು, ಪಕ್ಷಿಗಳಿಗೆ ಆಹಾರ, ನೀರು ಇಡುವುದು, ಒಣಗುತ್ತಿರುವ ಗಿಡ ಮರಗಳಿಗೆ ನೀರು ಹಾಕುವುದು. ಮಣ್ಣಿನ ವಿವಿಧ ಆಕೃತಿ ತಯಾರಿಕೆ, ಖಾದಿ ಧರಿಸುವುದು, ಫ್ರಿಡ್ಜ್ ಬಳಸದೇ ಮಣ್ಣಿನ ಮಡಿಕೆಯ ನೀರು ಕುಡಿಯುವುದು ಮುಂತಾದ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಒಳಗೊಂಡಿದೆ.ಸಂಪನ್ಮೂಲ ಶಿಕ್ಷಕರಾಗಿ ಕಲಾ ಶಿಕ್ಷಕ ಎಂ.ವೈ. ಬಡಿಗೇರ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಆರ್.ಎಸ್. ಗೂಳೇರ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದಾರೆ. ಮುಖ್ಯೋಪಾಧ್ಯಾಯಿನಿ ಸುಮನ್ ತೇಲಂಗ ಅಧ್ಯಕ್ಷತೆ ವಹಿಸುವರು ಪ್ರಕಟಣೆ ತಿಳಿಸಿದೆ.

Share this article