ವೀರಶೈವ ಸಮಾಜ ಅತ್ಯಂತ ಪುರಾತನವಾಗಿದ್ದು, ಸಮಾಜ ಒಡೆಯುವ ಪ್ರಯತ್ನ ನಡೆಸಿದ್ದ ಕೆಲವು ದುಷ್ಟ ಶಕ್ತಿಗಳನ್ನು ನಿರ್ಲಕ್ಷಿಸಬೇಕು ಎಂದು ಬಾಳೆಹೊನ್ನೂರ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರ ಸ್ವಾಮೀಜಿ ಹೇಳಿದರು.
ಹಾವೇರಿ: ವೀರಶೈವ ಸಮಾಜ ಅತ್ಯಂತ ಪುರಾತನವಾಗಿದ್ದು, ಸಮಾಜದ ಒಳಪಂಡಗಳು ಒಗ್ಗೂಡಿರಬೇಕು. ನಮ್ಮ ಸಮಾಜ ಒಡೆಯುವ ಪ್ರಯತ್ನ ನಡೆಸಿದ್ದ ಕೆಲವು ದುಷ್ಟ ಶಕ್ತಿಗಳನ್ನು ನಿರ್ಲಕ್ಷಿಸಬೇಕು ಎಂದು ಬಾಳೆಹೊನ್ನೂರ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರ ಸ್ವಾಮೀಜಿ ಹೇಳಿದರು.
ನಗರದ ಮಾಹೇಶ್ವರ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಯ 27ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಘಾತುಕ ಶಕ್ತಿಗಳ ಹಿಂದೆಯೂ ಇದ್ದವು, ಮುಂದೆಯೂ ಇರುತ್ತವೆ. ಅವುಗಳನ್ನು ನಿರ್ಲಕ್ಷ್ಯ ಮಾಡುತ್ತಾ ಸಾಗಬೇಕು. ವೀರಶೈವ ಧರ್ಮ ಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗಳಿಗೆ ಸಿದ್ಧಾಂತ ಶಿಖಾಮಣಿ ಬೋಧಿಸಿದರು. ಪಂಚಪೀಠಗಳು ಸಮಾಜದ ಎಲ್ಲ ಜಾತಿ, ಮತ ಪಂಥಗಳ ಬಗ್ಗೆ ಅಪಾರ ಗೌರವ ಇಟ್ಟಿವೆ. ವೀರಶೈವ ಲಿಂಗಾಯತ ಸಮಾಜವನ್ನು ಈ ಹಿಂದೆ ಒಡೆಯಲು ಯತ್ನಿಸಿದವರು ತಕ್ಕ ಪಾಠ ಕಲಿತಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಈ ವೀರಶೈವ ಲಿಂಗಾಯತ ಸಮಾಜವನ್ನು ಬೆಳೆಸಿದ್ದಾರೆ. ವೀರಶೈವ ಲಿಂಗಾಯತವನ್ನು ಪ್ರತ್ಯೇಕ ಮಾಡುವ ಕಾರ್ಯ ಎಂದೂ ಆಗದು. ತಂದೆ-ತಾಯಿಗಳು ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ನಮ್ಮ ಧರ್ಮದ, ಸಂಸ್ಕೃತಿ, ಪರಂಪರೆಯ ಬಗ್ಗೆ ಜ್ಞಾನ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ, ಸಿಂಧಗಿ ಶಾಂತವೀರೇಶ್ವರ ಮಠದ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಗ್ರಾಹಕ ಪ್ರಶಸ್ತಿ ನೀಡಲಾಯಿತು.
ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರ ಬಣ್ಣದಮಠ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಸೊಸೈಟಿ ಅಧ್ಯಕ್ಷ ಎಸ್.ಎನ್. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಜಾಗಟಗೇರಿಮಠ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ನಡುವಿನಮಠ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.