ರಾಂ ಅಜೆಕಾರು
ಪಶ್ಚಿಮ ಘಟ್ಟಗಳ ತಪ್ಪಲಿನ ಸಾಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮಂಗಗಳ ಸಾವು ಹೆಚ್ಚುತ್ತಿದ್ದು, ಈಗಾಗಲೇ ಕಾಡಂಚಿನ ಊರುಗಳಾದ ಹೆಬ್ರಿ, ಮುನಿಯಾಲು, ಮರ್ಣೆ, ಕೆರುವಾಶೆ, ಮಾಳ, ನಾಡ್ಪಾಲು ಗ್ರಾಮಗಳಲ್ಲಿ 8ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿದೆ. ಅದರಲ್ಲಿ ಮರ್ಣೆ ಗ್ರಾಮದಲ್ಲಿ ಸಾವಿಗೀಡಾದ ಮಂಗವೊಂದರಲ್ಲಿ ಮಂಗನ ಕಾಯಿಲೆ (ಕೆ.ಎಫ್.ಡಿ. ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ಇರುವುದು ಪತ್ತೆಯಾಗಿದೆ. ಆದರೆ ಮನುಷ್ಯರಿಗೆ ಹರಡಿದ ಪ್ರಕರಣಗಳು ವರದಿಯಾಗಿಲ್ಲ.ಮಂಗನಕಾಯಿಲೆ ಲಕ್ಷಣಗಳು:
ಕಾಡಿಗೆ ಹೋದಾಗ ಚಿಗಟ ಹುಣ್ಣುಗಳಿಂದ ಈ ಕಾಯಿಲೆ ಹರಡುತ್ತದೆ. ಕೆಂಪು ಚಿಗಟ ಕಡಿದಾಗ ಬರುವ ಈ ಕಾಯಿಲೆಯ ಮೊದಲ ಲಕ್ಷಣವೇ ಜ್ವರ. 10ರಿಂದ 12 ದಿನಗಳ ವರೆಗೆ ಜ್ವರ ಕಾಡುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ (ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆ ಹೆಚ್ಚು ಕಾಡಿಗೆ ಹೋಗುವವರಲ್ಲಿ, ಕಾಡಿನ ಹತ್ತಿರ ಮನೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಉಲ್ಬಣವಾಗಿ ಮಾರಣಾಂತಿಕವಾಗಬಹುದು.ಈ ಸೋಂಕು ಸಾಧಾರಣವಾಗಿ ಮಲೇರಿಯಾ ರೋಗದ ಲಕ್ಷಣಗಳನ್ನೇ ಹೋಲುತ್ತವೆ. ಯಾವುದೇ ಪ್ರಾಣಿಗಳಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜಾಗೃತರಾಗಿರಬೇಕು. ಜ್ವರ ಬಂದರೆ ತಕ್ಷಣವೇ ಸ್ಥಳೀಯ ಅರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.ಗ್ರಾಮಮಟ್ಟದಲ್ಲಿ ನಿರ್ವಹಣಾ ತಂಡ:ಕಾರ್ಕಳ ತಾಲೂಕಿನ 27 ಗ್ರಾ.ಪಂ.ನ 39 ಗ್ರಾಮಗಳು, ಹೆಬ್ರಿ ತಾಲೂಕಿನ 16 ಗ್ರಾಮಗಳಲ್ಲಿ ಮಂಗನ ಕಾಯಿಲೆ ನಿರ್ವಹಣೆಗಾಗಿ ಪ್ರತ್ಯೆಕ ಸಮಿತಿ ರಚಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಹೇಗೆ ತಪ್ಪಿಸಿಕೊಳ್ಳಬಹುದು:
ಒಟ್ಟು ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ 8 ಮಂಗನ ಮೃತದೇಹಗಳು ದೊರೆತ್ತಿದ್ದು, ಮರ್ಣೆ ಗ್ರಾಮದಲ್ಲಿ ಸತ್ತ ಮಂಗನ ಮೃತದೇಹದಲ್ಲಿ ಫ್ಲಾವಿವಿರಿಡೆ ವೈರಸ್ ಇರುವುದು ಪತ್ತೆಯಾಗಿದೆ. ಆದರೆ ಮನುಷ್ಯನಿಗೆ ಹರಡಿದ ಪ್ರಕರಣಗಳು ದಾಖಲಾಗಿಲ್ಲ. ಜ್ವರ ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ತಾಲೂಕು ಆಸ್ಪತ್ರೆಯಲ್ಲಿ ಸನ್ನದ್ಧವಾಗಿರುವಂತೆ ಪ್ರತ್ಯೇಕ ಬೆಡ್‌ಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ.
। ಡಾ. ಸಂದೀಪ್ ಕುಡ್ವ, ತಾಲೂಕು ವೈದ್ಯಾಧಿಕಾರಿ ಕಾರ್ಕಳ