)
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣದ ಆರೋಪಿಗಳಾದ ಸುಚಿತ್ರಾ ಹಲ್ದಾರ್, ಆಕೆಯ ಪತಿ ದೀಪಕ್ ಹಲ್ದಾರ್, ಮೊಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿ ಅವರನ್ನು ಖುಲಾಸೆಗೊಳಿಸಿ ಬೆಂಗಳೂರಿನ 65ನೇ ಹೆಚ್ಚುವರಿ ಸಿಟಿ ಸಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಮತ್ತು ಆರೋಪಿಗಳನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ (ಆರ್.ಟಿ.ನಗರ ಠಾಣಾ ಪೊಲೀಸರು) ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ್ ನೇತೃತ್ವದ ವಿಭಾಗೀಯಪೀಠ, ನಾಲ್ವರು ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.ಸದ್ಯ ಹೊರಗಿರುವ ನಾಲ್ವರು ಆರೋಪಿಗಳು ಎರಡು ವಾರಗಳಲ್ಲಿ ಅಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು. ಉಳಿದ ಅವಧಿಯ ಶಿಕ್ಷೆಯನ್ನು ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಮನೆಕೆಲಸದವರಾಗಿ ಸೇರಿ ಆ ನಂತರ ಪಿತೂರಿ ನಡೆಸಿ ಅಪರಾಧವೆಸಗಿದ್ದಾರೆ. ಘಟನೆ ನಡೆದ 20 ತಿಂಗಳ ನಂತರ ಅವರ ಬಂಧನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಲಸೆ ಕಾರ್ಮಿಕರು ಮನೆಗೆಲಸದ ನೆಪದಲ್ಲಿ ಮನೆಗಳನ್ನು ಸೇರಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ವಲಸೆ ಕಾರ್ಮಿಕರ ನಿಯಮಗಳನ್ನು ಬಿಗಿಗೊಳಿಸಲು ಇದು ಸಕಾಲ. ವಲಸೆ ಕಾರ್ಮಿಕರ ಮೇಲೆ ನಿಗಾ ಇಡಬೇಕಿದೆ. ಅದಕ್ಕಾಗಿ ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಪೀಠ ಹೇಳಿದೆ.
ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಪೊಲೀಸರು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅವರ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಮಾಡಬೇಕು. ಅದರ ಮಾಹಿತಿ ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಮಾಡಬೇಕು. ಇಂತಹ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕ ಮತ್ತು ಅಪರಾಧ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.
ಐಐಎಸ್ಸಿ ನಿವೃತ್ತ ಪ್ರೊಫೆಸರ್ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞರಾದ ಪುರುಷೋತ್ತಮಲಾಲ್ ಸಚ್‌ದೇವ್ (71), ಪತ್ನಿ ರೀಟಾ(62), ಪುತ್ರ ಮುನ್ನಾ(35) ಜತೆ ಆರ್.ಟಿ.ನಗರದ 80ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆ ಮನೆಗೆ ಕೆಲಸಕ್ಕೆ ಮೊದಲು ಸೇರಿದ ಸುಚಿತ್ರಾ, ನಂತರ ತನ್ನ ಪತಿಯನ್ನೂ ಕರೆ ತಂದಿದ್ದರು. ಇಬ್ಬರೂ ಔಟ್ ಹೌಸ್‌ನಲ್ಲಿಯೇ ನೆಲೆಸಿದ್ದರು. ಬಳಿಕ ಇತರೆ ಅಪರಾಧಿಗಳ ಜತೆ ಸೇರಿ ಸಂಚು ರೂಪಿಸಿ 2009ರ ಫೆ.16ರಂದು ಮೂವರನ್ನು ಕತ್ತು ಹಿಸುಕಿ ಕೊಂದು ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ 2016ರ ಫೆ.29ರಂದು ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಸರ್ಕಾರ ಹೈಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.