ಅಕ್ರಮ ಗರ್ಭಪಾತ: ಐವರಿಗೆ ಜಾಮೀನಿಲ್ಲ

KannadaprabhaNewsNetwork |  
Published : Jun 25, 2024, 01:45 AM ISTUpdated : Jun 25, 2024, 05:40 AM IST
Pregnant woman

ಸಾರಾಂಶ

ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ವೈದ್ಯ ಸೇರಿದಂತೆ ಐವರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

 ಬೆಂಗಳೂರು  : ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ವೈದ್ಯ ಸೇರಿದಂತೆ ಐವರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಪ್ರಕರಣದ ಸಂಬಂಧ ಬೆಂಗಳೂರಿನ ಶಾಂತಿನಗರದ ಡಾ.ಎಸ್‌.ಆದರ್ಶ್‌ ಹಾಗೂ ಮೈಸೂರು ತಾಲ್ಲೂಕಿನ ಸಾಲುಂಡಿ ಗ್ರಾಮದ ಶಿವಲಿಂಗ ನಾಯಕ್‌ ಸಲ್ಲಿಸಿದ್ದ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಮೇಲುಕೋಟೆ ಹೋಬಳಿಯ ಮಹದೇಶ್ವರಪುರದ ಎಂ.ಎಸ್‌.ಕಿರಣ್‌, ಪಾಂಡವಪುರ ತಾಲ್ಲೂಕು ಹೊಸಕೋಟೆಯ ಎಚ್‌.ಪಿ.ಅಖಿಲೇಶ್‌ ಹಾಗೂ ಕೆ.ಆರ್‌.ಪೇಟೆಯ ಶ್ರುತಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂ‌ರ್ತಿ ಎಂ.ಜಿ.ಉಮಾ ಅವರು ಈ ಆದೇಶ ಮಾಡಿದ್ದಾರೆ.

ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಆರೋಪಿಗಳ ವಿರುದ್ಧ ಅನಧಿಕೃತವಾಗಿ ಗರ್ಭಪಾತ ಮಾಡಿಸಿದ ಆಪಾದನೆಯಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇನ್ನೂ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹಾಗಾಗಿ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಹೊರಗುತ್ತಿಗೆಯ ಮೇಲೆ ಸಹಾಯಕಳಾಗಿ (ಗ್ರೂಪ್‌-ಡಿ) ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ ಎಂಬುವರು ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೇ 5ರಂದು ರಾತ್ರಿ 10.45ರ ವೇಳೆಯಲ್ಲಿ ಅಶ್ವಿನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವಿವಾಹಿತೆಗೆ ವಸತಿ ಗೃಹದಲ್ಲಿ ಗರ್ಭಪಾತವಾಗುವ ಔಷಧಿ ನೀಡಿದ್ದರು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂಬಂಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಪಾಂಡವಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಅಶ್ವಿನಿಗೆ ನೆರವು ನೀಡುತ್ತಿದ್ದ ಆರೋಪ ಶಿವಲಿಂಗನಾಯಕ್‌, ಎಂ.ಎಸ್‌.ಕಿರಣ್‌, ಎಚ್‌.ಪಿ.ಅಖಿಲೇಶ್‌ ಹಾಗೂ ಶ್ರುತಿ ಅವರ ಮೇಲಿದೆ. ಇದರಲ್ಲಿ ತಲೆಮರೆಸಿಕೊಂಡಿದ್ದ ಶಿವಲಿಂಗ ನಾಯಕ್‌ಗೆ ನಿರೀಕ್ಷಣಾ ಜಾಮೀನು ಮತ್ತು ಬಂಧನಕ್ಕೆ ಒಳಗಾಗಿದ್ದ ಉಳಿದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ ಮಂಡ್ಯದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಮೇ 29ರಂದು ಆದೇಶಿಸಿತ್ತು. ಇದರಿಂದ ಅವರು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಎಚ್‌.ಬಿ ಕಾಲೋನಿಯ ಓವಂ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಹೊಸಕೋಟೆ ಠಾಣಾ ಪೊಲೀಸರಿಗೆ 2024ರ ಮಾ.21ರಂದು ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ಎಂ. ಸುನೀಲ್‌ ಕುಮಾರ್‌ ದೂರು ನೀಡಿದ್ದರು. ಈ ದೂರಿನಲ್ಲಿ ಆರೋಪಿಯಾಗಿರುವ ವೈದ್ಯ ಡಾ.ಎಸ್‌. ಆದರ್ಶ್‌ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2024ರ ಏ.6ರಂದು ಆದೇಶಿಸಿತ್ತು. ಇದರಿಂದ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ