ಮುಂಡಗೋಡದಲ್ಲಿ ಮತ್ತೆ ಶುರುವಾದ ಅಕ್ರಮ ಇಟ್ಟಿಗೆ ಮಣ್ಣಿನ ಗಣಿಗಾರಿಕೆ

KannadaprabhaNewsNetwork |  
Published : Mar 05, 2025, 12:31 AM IST
ಮುಂಡಗೋಡ: ಕೃಷಿ ಭೂಮಿಯಲ್ಲಿ ಅಕ್ರಮ ಇಟ್ಟಿಗೆ ಗಣಿಗಾರಿಕೆ ಮತ್ತೆ ಯಥಾ ರೀತಿ ರಾಜಾರೋಷವಾಗಿ ಮುಂದುವರೆಸಲಾಗಿದೆ. | Kannada Prabha

ಸಾರಾಂಶ

ಇಟ್ಟಿಗೆ ಗಣಿಗಾರಿಕೆ ಮತ್ತೆ ರಾಜಾರೋಷವಾಗಿ ಮುಂದುವರೆದಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೂ ಪಟ್ಟಭದ್ರರ ಒತ್ತಡಕ್ಕೆ ಮಣಿದು ಸುಮ್ಮನಾದರೆ ಎಂಬ ಅನುಮಾನ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ

ಮುಂಡಗೋಡ: ತಾಲೂಕಿನಾದ್ಯಂತ ಕೃಷಿ ಭೂಮಿಯಲ್ಲಿ ಅಕ್ರಮ ಇಟ್ಟಿಗೆ ಮಣ್ಣಿನ ಗಣಿಗಾರಿಕೆ ಮತ್ತೆ ಜೋರಾಗಿದೆ.

ಕಳೆದ ೧೫ ದಿನಗಳ ಹಿಂದೆ ತಹಸೀಲ್ದಾರ ಶಂಕರ ಗೌಡಿ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ತಯಾರಿಸಲಾದ ಇಟ್ಟಿಗೆ ಬಟ್ಟಿಯನ್ನು ೨೪ ಗಂಟೆಯೊಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ನೋಟಿಸ್ ನೀಡಿದ್ದರು. ಇದಕ್ಕೆ ಸೂಕ್ತವಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಮರುದಿನ ತಾಲೂಕಿನ ಮರಗಡಿ, ಓಣಿಕೇರಿ ಭಾಗಕ್ಕೆ ಪೊಲೀಸ್‌ ಬಂದೋಬಸ್ತ್ ನೊಂದಿಗೆ ಲಗ್ಗೆ ಇಟ್ಟ ತಹಸೀಲ್ದಾರ, ಜೆಸಿಬಿ ಮೂಲಕ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸಲು ಚಾಲನೆ ನೀಡಿದ್ದರು.

ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲಿನ ಇಟ್ಟಿಗೆ ಭಟ್ಟಿ ಮಾಲಿಕರು, ದಯವಿಟ್ಟು ತೆರವುಗೊಳಿಸಬೇಡಿ ನಮ್ಮಿಂದ ತಪ್ಪಾಗಿದ್ದು, ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರೀಯಿಸಿದ್ದ ತಹಸೀಲ್ದಾರ ಶಂಕರ ಗೌಡಿ, ಕೃಷಿ ಚಟುವಟಿಕೆ ನಡೆಸಬೇಕಾದ ಭೂಮಿಯಲ್ಲಿ ಪೂರ್ವಾನುಮತಿ ಇಲ್ಲದೆ ಅಕ್ರಮವಾಗಿ ಇಟ್ಟಿಗೆ ತಯಾರಿಸುವುದು ಕಾನೂನು ರೀತಿ ಅಪರಾಧವಾಗಿದ್ದು, ಕಾನೂನು ಪ್ರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ಅಧಿಕೃತವಾಗಿ ಪ್ರಾರಂಭಿಸಬೇಕು. ಅದು ಬಿಟ್ಟು ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನೀರು, ವಿದ್ಯುತ್ ಬಳಕೆ ಮಾಡಿಕೊಂಡು ನಿಮ್ಮ ಮನಬಂದಂತೆ ನಡೆದುಕೊಳ್ಳುತ್ತೀರೇನು ಎಂದು ಪ್ರಶ್ನಿಸಿದರು.

ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಇಟ್ಟಿಗೆ ಬಟ್ಟಿ ಮಾಲಿಕರು ಅಂಗಲಾಚಿ ತೀವ್ರ ಮನವಿ ಮಾಡಿಕೊಂಡ ಬಳಿಕ ಮನಸ್ಸು ಬದಲಾಯಿಸಿದ ತಹಸೀಲ್ದಾರ, ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಒಂದು ತುಂಡು ಇಟ್ಟಿಗೆ ಇಲ್ಲದಂತೆ ತೆರವುಗೊಳಿಸಿ ಸಂಪೂರ್ಣ ಸಾಗುವಳಿ ಜಮೀನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಮತ್ತೆ ನಾಲ್ಕೈದು ಜೆಸಿಬಿಯೊಂದಿಗೆ ಆಗಮಿಸಿ ನೆಲಸಮಗೊಳಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ತೆರಳಿದ್ದರು. ಆದರೆ ೧೫ ದಿನ ಕಳೆದರೂ ಕೂಡ ತೆರವು ಕಾರ್ಯಾಚರಣೆಗೆ ಮುಂದಾಗಿಲ್ಲ. ಇಟ್ಟಿಗೆ ಗಣಿಗಾರಿಕೆ ಮತ್ತೆ ರಾಜಾರೋಷವಾಗಿ ಮುಂದುವರೆದಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೂ ಪಟ್ಟಭದ್ರರ ಒತ್ತಡಕ್ಕೆ ಮಣಿದು ಸುಮ್ಮನಾದರೆ ಎಂಬ ಅನುಮಾನ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಈ ಬಗ್ಗೆ ಮಾಹಿತಿ ಪಡೆಯಲು ತಹಸೀಲ್ದಾರ ಶಂಕರ ಗೌಡಿ ಅವರಿಗೆ ಎಷ್ಟು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕಸಲಿಲ್ಲ. ತಹಸೀಲ್ದಾರ ಯಾವುದೇ ಕರೆ ಸ್ವೀಕರಿಸುವುದಿಲ್ಲ ಎಂಬ ಆರೋಪವಿದೆ.

ಅಕ್ರಮವಾಗಿ ಕೆರೆ ಹಾಗೂ ಬೋರವೇಲ್‌ ನೀರು ಮತ್ತು ಕೃಷಿ ಚಟುವಟಿಕೆಗೆ ನೀಡಿದ ವಿದ್ಯುತ್‌ನ್ನು ದುರುಪಯೋಗಪಡಿಸಿಕೊಂಡು ಇಟ್ಟಿಗೆ ತಯಾರಿಸುವುದು ಒಂದು ಉದ್ಯೋಗವನ್ನಾಗಿ ಮಾಡಿಕೊಳ್ಳಲಾಗಿದೆ. ಬೇಸಿಗೆ ಪ್ರಾರಂಭವಾಗಿದ್ದು, ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದು ಕಷ್ಟವಾಗಲಿದೆ. ತಕ್ಷಣ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಗೌಳಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''