ಖಾಲಿ ಜಾಗದಲ್ಲೆಲ್ಲ ಅಕ್ರಮ ಮರಳು ಸಂಗ್ರಹ

KannadaprabhaNewsNetwork | Published : May 21, 2024 12:35 AM

ಸಾರಾಂಶ

ನದಿಯಲ್ಲಿ ನೀರು ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಅಕ್ರಮ ಮರಳು ದಂಧೆಕೋರರು ನದಿ ದಂಡೆ, ನದಿಗೆ ಹೋಗುವ ರಸ್ತೆ, ಮನೆಯ ಮುಂದೆ, ಖಣ ಹೀಗೆ ಎಲ್ಲಿ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ.

ಗುತ್ತಲ:ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಅಕ್ರಮ ಮರಳು ದಂಧೆಕೋರರು ನದಿ ದಂಡೆ, ನದಿಗೆ ಹೋಗುವ ರಸ್ತೆ, ಮನೆಯ ಮುಂದೆ, ಖಣ ಹೀಗೆ ಎಲ್ಲಿ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ.

ಗುತ್ತಲ ಸಮೀಪದ ಹುರಳಿಹಾಳ, ಹರಳಹಳ್ಳಿ, ಹಾವನೂರ, ಗಳಗನಾಥ, ನರಸೀಪುರ, ಕಂಚಾರಗಟ್ಟಿ, ತೆರೆದಹಳ್ಳಿ, ಮೇವುಂಡಿ ಭಾಗದಲ್ಲಿ ಅಕ್ರಮ ಮರಳು ದಂಧೆ ಸದ್ದಿಲ್ಲದೇ ನಡೆದಿದೆ. ಗಳಗನಾಥ ಗ್ರಾಮದಲ್ಲಿನ ಅಕ್ರಮ ಮರಳು ಸಂಗ್ರಹದ ಮೇಲೆ ದಾಳಿ ಮಾಡಿದ್ದ ಗಣಿ ಇಲಾಖೆಯ ಅಧಿಕಾರಿಗಳು ಅಪಾರ ಪ್ರಮಾಣದಲ್ಲಿನ ಮರಳು ರಾಶಿಯನ್ನು ಬಿಟ್ಟು ಅಲ್ಪ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರೈತರು ಹೇಳುತ್ತಾರೆ.

ಆದರೆ, ಹುರಳಿಹಾಳ, ಹರಳಹಳ್ಳಿ ಗ್ರಾಮದ ವಿವಿಧೆಡೆ ಸಾವಿರಾರು ಮೆಟ್ರಿಕ್ ಟನ್‌ನಷ್ಟು ಮರಳು ಸಂಗ್ರಹವಿದ್ದರೂ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗಿಲ್ಲ. ಅಕ್ರಮ ಮರಳು ಸಂಗ್ರಹವನ್ನು ಕಣ್ಣಾರೆ ಕಂಡರೂ ವಶಪಡಿಸಿಕೊಂಡಿಲ್ಲ. ಅದರ ಬದಲು ಗಳಗನಾಥ ಗ್ರಾಮದತ್ತ ತೆರಳಿದ್ದಾರೆ ಎಂದು ಹುರಳಿಹಾಳ ಗ್ರಾಮಸ್ಥರು ಹೇಳುತ್ತಾರೆ. ರಾಜಾರೋಷವಾಗಿ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ದಾಳಿಗೆ ಮೊದಲೇ ಮಾಹಿತಿ: ಜೆಸಿಬಿ ಯಂತ್ರ, ಟ್ರ್ಯಾಕ್ಟರ್ ಹಾಗೂ ಕಾರ್ಮಿಕರನ್ನು ಬಳಸಿ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತದೆ. ಆದರೆ ಗಣಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿಗೆ ಬರುತ್ತಾರೆ ಎಂದಾದರೆ ಅವರಿಗೆ ಮಾಹಿತಿ ಸಿಗುತ್ತದೆ. ಮರಳು ದಂಧೆಕೋರರಿಗೆ ಮುನ್ಸೂಚನೆ ದೊರೆಯುವುದು ಹೇಗೆ ಮೊದಲೇ ಎಂಬುದೇ ಯಕ್ಷ ಪ್ರಶ್ನೆ. ಅಧಿಕಾರಿಗಳ ಕಾರನ್ನು ಬೆನ್ನು ಹತ್ತಿ ಅವರ ಚಲನವಲನ ತಿಳಿಯಲು ಹಲವು ಬೈಕ್, ಕಾರುಗಳು ಮೊದಲೇ ಸಿದ್ಧವಾಗಿರುತ್ತವೆ ಎಂಬುದು ಗ್ರಾಮಸ್ಥರಿಗೆ ತಿಳಿದಿದೆ.

ಅನ್ಯ ತಾಲೂಕಿನ ಟ್ರ್ಯಾಕ್ಟರ್‌ಗಳು: ಹಾವನೂರ, ಹುರುಳಿಹಾಳ, ಹರಳಹಳ್ಳಿ ಗ್ರಾಮದ ಮರಳು ದಂಧೆಕೋರರು ನದಿಯಿಂದ ತಮ್ಮ ನಿಗದಿತ ಸ್ಥಳಗಳಿಗೆ ಮರಳನ್ನು ಸಂಗ್ರಹ ಮಾಡಲು ಲಕ್ಷ್ಮೇಶ್ವರ, ಸವಣೂರ, ಹಡಗಲಿ ತಾಲೂಕಿನ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗಾಗಿ ತಂದಿರುವ ವಿಷಯ ಬೆಳಕಿಗೆ ಬಂದಿದೆ. ಟ್ರ್ಯಾಕ್ಟರ್ 1 ಟ್ರಿಪ್‌ಗೆ ₹500-600 ನೀಡುತ್ತಿದ್ದು, ಪ್ರತಿ ದಿನ 10-12 ಟ್ರಿಪ್ ಆಗುತ್ತದೆ. ಉತ್ತಮ ಆದಾಯವಾಗುತ್ತದೆ ಎಂದು ಚಾಲಕನೊಬ್ಬ ತಿಳಿಸಿದನು.

ಜನರಿಗೆ ನೀಗದ ಸಮಸ್ಯೆ:ಪ್ರತಿ ನಿತ್ಯ ಅನೇಕ ವಾಹನಗಳಲ್ಲಿ ಅಕ್ರಮ ಮರಳು ಸಂಗ್ರಹ, ಸಾಗಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಹುರಳಿಹಾಳ, ಹಾವನೂರ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಸಂಗ್ರಹಿಸಿ ಟ್ರ್ಯಾಕ್ಟರ್‌ನಲ್ಲಿಯೇ ಜರಡಿಯಿಂದ ಮರಳನ್ನು ಸೋಸಿ ಆನಂತರ ಲಾರಿ ಹಾಗೂ ಟಿಪ್ಪರ್‌ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಧಿಕೃತ ಮರಳು ಸಂಗ್ರಹಣಾ ಕೇಂದ್ರಗಳಲ್ಲಿ ಸಂಗ್ರಹಿಸಿ ಮರಳನ್ನು ಜಿಲ್ಲಾಡಳಿತ ನೀಡಿದರೆ ಕಡಿಮೆ ಬೆಲೆಗೆ ಜನರಿಗೆ ಸಿಗುತ್ತದೆ. ಆದರೆ, ಸರ್ಕಾರದಿಂದ ಪರವಾನಗಿ ಪಡೆದಿರುವ ಸಂಗ್ರಹಣಾ ಕೇಂದ್ರಗಳು ತಿಂಗಳಿನಲ್ಲಿ ಬೆರಳೆಣಿಕೆಯ ದಿನ ಮಾತ್ರ ನಡೆಯುತ್ತವೆ. ಇದರಿಂದ ಜನರಿಗೆ ಕಡಿಮೆ ಹಣಕ್ಕೆ ಮರಳು ದೊರೆಯದೇ ಅಕ್ರಮದ ಮರಳಿಗೆ ಹೆಚ್ಚಿನ ಹಣ ನೀಡಿ ಪಡೆಯಬೇಕಾಗಿದೆ.

ಜಿಲ್ಲಾಡಳಿತ ಅಕ್ರಮಕ್ಕೆ ಕಡಿವಾಣ ಹಾಕಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮರಳು ಸಂಗ್ರಹಣಾ ಕೇಂದ್ರದಲ್ಲಿ ಪಾಸ್ ನೀಡಿ ಮರಳು ಕೊಟ್ಟರೆ ಬಡ ಜನರಿಗೆ ಸಹಾಯವಾಗುವುದಲ್ಲದೆ ಸರ್ಕಾರದ ಬೊಕ್ಕಸಕ್ಕೂ ಲಕ್ಷಾಂತರ ಹಣ ಸಂಗ್ರಹವಾಗುತ್ತದೆ.

ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಚಿಸಿರುವ ವಿಶೇಷ ಕಾರ್ಯಾಚರಣೆ ತಂಡವು ಅಕ್ರ ಮ ಮರಳು ಸಂಗ್ರಹ ಹಾಗೂ ಸಾಗಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.

ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೆ ಹಾನಿಯಾಗುವುದು, ಅದರಂತೆ ಅಕ್ರಮ ಮರಳುಗಾರಿಕೆಯ ಮೇಲೆ ನಿರಂತರವಾಗಿ ದಾಳಿ ಮಾಡಿದ್ದೇವೆ. ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಯಾವುದೇ ಮುಲಾಜಿಲ್ಲದೆ ಕೆಲಸ ಮಾಡುತ್ತೇವೆ ಎಂದು ಹಾವೇರಿ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಾ. ಉಮೇಶ ಬಗರಿ ಹೇಳಿದರು.

Share this article