ರಂಗೂಪುರ ಶಿವಕುಮಾರ್
ತಾಲೂಕಿನ ಅರೇಪುರ ಗೇಟ್ ಬಳಿಯ ತೊಂಡವಾಡಿ ಗ್ರಾಮದ ೩೬ ಗುಂಟೆ ಸರ್ಕಾರಿ ಕೆಬ್ಬೆಕಟ್ಟೆ ಕಬಳಿಸಿ ಕ್ರಷರ್ ಘಟಕ ಆರಂಭವಾಗಿದೆ.ಆದರೆ ಜಿಲ್ಲಾಡಳಿತ ಎಲ್ಲಾ ನಿಯಮ ಗಾಳಿಗೆ ತೂರಿ ಅನುಮತಿ ನೀಡುವ ಮೂಲಕ ತಾಲೂಕಿನಲ್ಲಿ ದುಡ್ಡು ಕೊಟ್ಟರೆ ಏನೆಲ್ಲ ನಡೆಯುತ್ತಿದೆ ಎಂಬುದಕ್ಕೆ ಜೆಬಿಎಲ್‌ಆರ್ ಕ್ರಷರ್ ಸದ್ದು ಮಾಡುತ್ತಿರುವುದೇ ದೊಡ್ಡ ಸಾಕ್ಷಿ ಗುಡ್ಡೆ!
ತಾಲೂಕಿನ ತೊಂಡವಾಡಿ ಸ.ನಂ.೨೫೧ ರಲ್ಲಿ ೩೬ ಗುಂಟೆ ವಿಸ್ತೀರ್ಣದ ಸರ್ಕಾರಿ ಕೆಬ್ಬೆಕಟ್ಟೆಯೀಗ ಬಹುತೇಕ ಒತ್ತುವರಿಯಾಗಿದೆ.ಮೈಸೂರು-ಊಟಿ ಹೆದ್ದಾರಿಯಿಂದ ಹಾಲಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಇದೆ.ದುರಂತ ಎಂದರೆ ಸ.ನಂ.೨೫೧ರಲ್ಲಿ ಸರ್ಕಾರಿ ಕೆಬ್ಬೆಕಟ್ಟೆ ಒತ್ತುವರಿಯಾಗಿದ್ದು,ಕಟ್ಟೆಗೆ ನೀರು ಹರಿಯುವ ಹಳ್ಳ ಕೂಡ ಒತ್ತುವರಿಯಾಗಿದೆ.ತಲಾ ತಲಾಂತರದಿಂದಲೂ ನೀರು ಹರಿಯುವ ಹಳ್ಳದ ಮೂಲಕ ಕೆಬ್ಬೆಕಟ್ಟೆ ಸುತ್ತಲಿನ ಜಮೀನಿಗೆ ರೈತರು ತೆರಳುತ್ತಿದ್ದರು ಎಂಬ ಮಾತಿದೆ. ಆದರೀಗ ರೈತರು ಕಟ್ಟೆ ಬದಿಯ ಜಮೀನಿಗೆ ಹೋಗಲು ಆಗುತ್ತಿಲ್ಲ. ಜತೆಗೆ ನೀರು ಹರಿಯುವ ಹಳ್ಳ ಮುಚ್ಚಿರುವ ಕಾರಣ ಕೆಲವು ರೈತರು ಜಮೀನಿಗೆ ಹೋಗಲು ದಾರಿಯಿಲ್ಲ ಎಂದು ಜಮೀನನ್ನು ಪಾಳು ಬಿಟ್ಟಿದ್ದಾರೆ.
ಸರ್ಕಾರಿ ಕಟ್ಟೆ,ಕೆರೆ,ರಾಜ ಕಾಲುವೆ,ನೀರು ಹರಿಯುವ ಹಳ್ಳ,ಸಾರ್ವಜನಿಕ ರಸ್ತೆಗೆ ೧೦೦/೨೦೦ ಮೀಟರ್ ಬಫರ್ ಜಾಗ ಬಿಡಬೇಕಿದೆ ಆದರೆ ಇಲ್ಲಿ ನಿಯಮಗಳೆಲ್ಲ ಉಲ್ಲಂಘನೆಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ.
ಕ್ರಷರ್ ಪಕ್ಕದಲ್ಲೇ ಮೈಸೂರು-ಊಟಿ ಹೆದ್ದಾರಿಯಿಂದ ಹಾಲಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ,ಸರ್ಕಾರಿ ಕೆಬ್ಬೆಕಟ್ಟೆ, ನೀರು ಹರಿಯುವ ಹಳ್ಳ ಇದೆ. ಕೆಬ್ಬೆಕಟ್ಟೆ ಒತ್ತುವರಿಯಾಗಿದೆ. ನೀರು ಹರಿಯುವ ಹಳ್ಳ ಮುಚ್ಚಲಾಗಿದೆ. ಬಫರ್ ಜಾಗ ಬಿಟ್ಟಿಲ್ಲದಿದ್ದಲ್ಲೂ ಅನುಮತಿ ಹೇಗೆ ಸಿಕ್ತು ಎಂಬ ಪ್ರಶ್ನೆ ಕಾಡುತ್ತಿದೆ.
ಕ್ರಷರ್‌ನ ದಕ್ಷಿಣ ದಿಕ್ಕಿನ ಸರ್ಕಾರಿ ಕೆಬ್ಬೆಕಟ್ಟೆ ಕಬಳಿಸಿರುವ ಜತೆಗೆ ಕ್ರಷರ್‌ನಿಂದ ಬರುವ ವೇಸ್ಟ್ ಸ್ಲರಿ ತುಂಬುತ್ತಿದ್ದಾರೆ. ಕಟ್ಟೆ ಸುತ್ತ ಮುತ್ತ ಬಫರ್ ಜಾಗ ಬಿಡದೆ ಸರ್ಕಾರಿ ಕಟ್ಟೆ ಒತ್ತುವರಿ ಆಗಿದೆ ಜಾಗ ಬಿಡಿಸಿ ಎಂದು ತೊಂಡವಾಡಿ ಗ್ರಾಮದ ಕೆಬ್ಬೆಕಟ್ಟೆ ಸುತ್ತಲಿನ ರೈತರು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ.