ಕನ್ನಡಪ್ರಭ ವಾರ್ತೆ, ಮೂಡಿಗೆರೆ
ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಫಾರಂ ನಂಬರ್ 50 ಹಾಗೂ 53 ರಲ್ಲಿ ಸಾವಿರಾರು ಮಂದಿಗೆ ಅಕ್ರಮವಾಗಿ ಭೂ ಮಂಜೂರಾತಿಯಾಗಿರುವುದನ್ನು ಪತ್ತೆ ಮಾಡಲಾಗಿದೆ. ಅದರ ಆಧಾರದ ಮೇಲೆ ಅಕ್ರಮ ಭೂ ಮಂಜೂರಾತಿ ಅರ್ಜಿ ವಜಾ ಮಾಡಲಾಗುತ್ತಿದೆ. ನೈಜ ಫಲಾನುಭವಿಗಳಿಗೆ ತೊಂದರೆ ಆಗಿದ್ದರೆ, ಅಂತವರು ಪುನಃ ಅರ್ಜಿ ಸಲ್ಲಿಸಿದರೆ ಪರಿಶೀಲಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.ತಾಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಆಟದ ಮೈದಾನ, ಅಂಗನವಾಡಿ, ನಿವೇಶನ ಸೇರಿದಂತೆ ಜನರಿಗೆ ಅನುಕೂಲವಾಗುವಂತಹ ಕಾರ್ಯ ನಡೆಸಲು ಅಕ್ರಮ ಭೂ ಮಂಜೂರಾತಿ ಹಾಗೂ ಒತ್ತುವರಿಯಿಂದ ಸಮಸ್ಯೆ ಉಂಟಾಗಿದೆ. ಹಾಗಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಸರಕಾರದಿಂದ ತನಿಖಾ ತಂಡ ಆಗಮಿಸಿ ತನಿಖೆ ನಡೆಸಿ ವರದಿ ಪಡೆದುಕೊಳ್ಳಲಾಗಿದೆ ಎಂದರು.
ಸರಕಾರ ರಾಜ್ಯಾದ್ಯಂತ ಪೋಡಿ ಮುಕ್ತ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಸಾಕಷ್ಟು ಪ್ರಗತಿ ಕಂಡಿದೆ. ರಾಜ್ಯದಲ್ಲಿ ಪಟ್ಟಣ ವ್ಯಾಪ್ತಿ 3, ನಗರದಲ್ಲಿ 10, ಮಹಾನನಗರದಲ್ಲಿ 18 ಕಿ.ಮೀ. ವ್ಯಾಪ್ತಿ ಮೇಲೆ ಮಂಜೂರಾಗಿದ್ದ ಭೂಮಿಗೆ ಪೋಡ್ ಮಾಡ ಬಾರದೆಂಬ ನಿಯಮವಿದೆ. ಹಿಂದೆ ಪೋಡ್‌ಗಾಗಿ ಅರ್ಜಿ ನೀಡಿದವರ ದಾಖಲೆ ನೈಜವಾಗಿದ್ದರೆ ಅಂತಹ ಅರ್ಜಿಗಳನ್ನು ವಿಲೇ ಮಾಡಬಹುದಾಗಿದೆ ಎಂದು ಹೇಳಿದರು.ಕಟಾರಿಯಾ ಅವರು ಆರಂಭದಲ್ಲಿ ಸರ್ವೆ, ಭೂಮಿ, ನೋಂದಣಿ ಸೇರಿದಂತೆ ವಿವಿಧ ವಿಭಾಗದ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಎಲ್ಲಾ ಕಡತಗಳನ್ನು ಜೋಪಾನ ಮಾಡಬೇಕು. ಹಳೆ ಕಡತಗಳನ್ನು ಸ್ಕಾನ್ ಮಾಡಿಟ್ಟುಕೊಂಡು ನಂತರ ನಾಶಪಡಿಸಬೇಕು. ಕೊಠಡಿ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಕಟ್ಟಡ ದುರಸ್ತಿ ಕಾಮಗಾರಿ ವೀಕ್ಷಿಸಿ, ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ತಹಸೀಲ್ದಾರ್ ರಾಜಶೇಖರ್ ಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.28 ಕೆಸಿಕೆಎಂ 2ಮೂಡಿಗೆರೆ ತಾಲೂಕು ಕಚೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಇದ್ದರು.