ಕನ್ನಡ ಪ್ರಭ ವಾರ್ತೆ ಮಳವಳ್ಳಿ
ತಾಲೂಕಿನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಭೂ ಕಬಳಿಕೆ ಸಂಬಂಧ ಉನ್ನತ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿಯ ಆವರಣದಲ್ಲಿ ಫಲಾನುಭವಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸವಲತ್ತು ವಿತರಿಸಿ ಮಾತನಾಡಿ, ತಾಲೂಕಿನ ಅಕ್ರಮ ಭೂ ಕಬಳಿಕೆ ಹಗರಣಗಳ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನದ ಭಾಗವಾಗಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಹೆದರುವ ಮಗ ನಾನಲ್ಲ. ಒಬ್ಬ ಪ್ರತಿನಿಧಿಯಾಗಿ ಸರ್ಕಾರಿ ಭೂಮಿ ರಕ್ಷಣೆ ಮಾಡುವುದು ನನ್ನ ಕೆಲಸ ಎಂದು ಸ್ಪಷ್ಟಪಡಿಸಿದರು.
ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.ಸಾವಿರಾರು ಎಕರೆ ಸರ್ಕಾರಿ ಭೂ ಪರಭಾರೆಯಾಗಿರುವುದರಿಂದ ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಮಿತಿ ರಚನೆಗೆ ಮುಂದಾಗುತ್ತೇವೆ ಎಂದರು.
ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ನಿರಂತರವಾಗಿ ನಡೆದಿರುವ ಸರ್ಕಾರಿ ಭೂಮಿಗಳ ಪರಭಾರೆ ಬಗ್ಗೆ ಚುನಾವಣೆಗೆ ಮುನ್ನವೇ ಧ್ವನಿ ಎತ್ತಿದ್ದೆ. ನಾನು ಆಯ್ಕೆಯಾದ ನಂತರವೂ ಖುದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಕೊರತೆ ಇದ್ದ ದಾಖಲೆಗಳು ಲಭ್ಯವಾಗಿ 300 ಎಕರೆ ಸರ್ಕಾರಿ ಭೂಗಳನ್ನು ಹಿಂಪಡೆಯಲಾಗಿದೆ. ಇನ್ನೂ 400 ಎಕರೆ ಭೂ ಸದ್ಯದಲ್ಲಿಯೇ ವಾಪಾಸ್ ಆಗುವ ಸಾಧ್ಯತೆ ಇದೆ ಎಂದರು.ಅಕ್ರಮ ಭೂಮಿ ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆಯೇ ನನ್ನ ಮೇಲೆಯೇ ದಬ್ಬಾಳಿಕೆ ದೌರ್ಜನ್ಯ ನಡೆಸುವ ಪ್ರಯತ್ನ ನಡೆಯುತ್ತಿವೆ. ಇಂತಹ ಬೆದರಿಕೆಗಳಿಗೆ ಬಗ್ಗುವ ಜಯಮಾನ ನನ್ನದಲ್ಲ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂದರು.
ಈಗ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಕಳೆದ ಎರಡು ವರ್ಷಗಳ ಹಿಂದೆ ವರ್ಗಾವಣೆಯಾಗಿದ್ದ ವೇಳೆ ಆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಪತ್ರ ಕೊಟ್ಟವರೂ ಯಾರೂ ಎನ್ನುವುದನ್ನು ಹೇಳಲಿ. ಹಗರಣದಲ್ಲಿ ಭಾಗಿಯಾಗಿರುವ ಕೆಲವರು ತನಿಖೆಯಿಂದ ತಪ್ಪಿಸಿಕೊಳ್ಳಲು ಇಂಥ ಹೋರಾಟ ನಡೆಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಸ್ವಾತಂತ್ರ್ಯವಿದೆ ಎಂದರು.ಇದೇ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕೊಳವೆ ಬಾವಿ ಕೊರೆದ 6 ಮಂದಿ ಫಲಾನುಭವಿಗಳಿಗೆ ಸಲಕರಣೆಗಳು ಹಾಗೂ ಇಬ್ಬರು ಮಹಿಳೆಯರಿಗೆ ಸಾಲದ ಚೆಕ್ ಗಳನ್ನು ವಿತರಿಸಿದರು.
ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕಿ ಮಧುಶ್ರೀ, ತಾಲೂಕು ಅಧಿಕಾರಿ ಆಶಾ ಇದ್ದರು.