ಕನ್ನಡಪ್ರಭ ವಾರ್ತೆ ಕಲಬುರಗಿ
ನಗರ ಸೇರಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹಡಗಿಲ್ ಹಾರುತಿ ಗ್ರಾಮದ ಹನುಮಾನ ಗುಡಿ ಹತ್ತಿರವಿರುವ ಕಿರಾಣಿ ಅಂಗಡಿ ಮುಂದುಗಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಪುಲ್ಲಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸುರೇಶ ತಳವಾರ (30) ಎಂಬಾತನನ್ನು ಬಂಧಿಸಿ 11,606 ರು. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.ಆರ್.ಜಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯ ನಗರ ಕಾಲೋನಿಯ ನೀರಿನ ಟಾಕಿ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಎಸ್‍ಐ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮೀನಾಕ್ಷಿ ಬಾಳಪ್ಪಾ ಗುತ್ತೇದಾರ (52) ಎಂಬುವವರನ್ನು ಬಂಧಿಸಿ 1620 ರು.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಗಂಗಾನಗರದ ಯಲ್ಲಮ್ಮ ದೇವಿ ಗುಡಿ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎ.ಎಸ್.ಐ ಹಣಮಂತ ಕಟ್ಟಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬಾಬುರಾವ ಜಮಾದಾರ ಎಂಬಾತನನ್ನು ಬಂಧಿಸಿ 1680 ರು.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕೂಬ್ ಮನಿಯಾರ್ ಚಾಳ್ ಹೆಡ್ ಪೋಸ್ಟ್ ಆಫೀಸ್ ಎದರುಗಡೆಯ ಲೈನ್ಸ್ ಕ್ಲಬ್ ಕಂಪೌಂಡ್ ಗೋಡೆಯ ಗಿಡದ ಪಕ್ಕದ ಖುಲ್ಲಾ ಜಾಗದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಎಸ್‍ಐ ತಸ್ಲೀಮಾ ಸುಲ್ತಾನಾ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಹಾಂತೇಶ ಜಮಾದಾರ ಎಂಬಾತನನ್ನು ಬಂಧಿಸಿ 5477 ರು.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಫರಹತಾಬಾದ, ಆರ್.ಜಿ.ನಗರ ಮತ್ತು ಚೌಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.