ಕೆಂಪು ಕಲ್ಲು ಗಣಿಗಾರಿಕೆ ಅಕ್ರಮ ಅವ್ಯಾಹತ

KannadaprabhaNewsNetwork | Published : Oct 28, 2024 1:05 AM

ಸಾರಾಂಶ

ಬ್ಯಾಕೋಡು ಸಮೀಪ ಚೆನ್ನಗೊಂಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕೆಂಪು ಕಲ್ಲು ಕೊರೆಯ ನೋಟ.

ಪ್ರದೀಪ್ ಮಾವಿನಕೈ

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಅಕ್ರಮ ಗಣಿಗಾರಿಕೆ ಪತ್ತೆಯಾದರೂ ಸರಿಯಾಗಿ ಪ್ರಕರಣ ದಾಖಲಿಸದೇ ಇರುವುದು ಮತ್ತು ಕಾನೂನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವ ವಿಚಾರದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವ ಕಾರಣ ಎಗ್ಗಿಲ್ಲದಂತೆ ಅಕ್ರಮ ಕ್ವಾರೆ ನಡೆಯುತ್ತಿರುವುದಕ್ಕೆ ಚನ್ನಗೊಂಡ ಗ್ರಾಮದ ಹೊಂಡಗದ್ದೆ ಎಂಬಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಕ್ವಾರೆಯೇ ಸಾಕ್ಷಿಯಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಒಂದೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಜತೆ ಶಾಮೀಲಾಗಿರುವುದು ಇನ್ನೊಂದು ಸಮಸ್ಯೆಯಾಗಿ ಕಾಡುತ್ತಿದೆ.

ಸಾಗರ ತಾಲೂಕಿನ ಚನ್ನಗೊಂಡ ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದ ಸರ್ವೇ ನಂಬರ್ 252, 277, 250, 278 ರ ಹೊಂಡಗದ್ದೆ ಸಮೀಪದ ಕಂದಾಯ ಇಲಾಖೆ ಹಾಗೂ ವನ್ಯಜೀವಿ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆದಿದೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ರೈತರ ಆರೋಪ.

ಕರೂರು, ಬಾರಂಗಿ ಅವಳಿ ಹೋಬಳಿಯ ಈ ಪ್ರದೇಶದಲ್ಲಿ 9ಕ್ಕೂ ಹೆಚ್ಚು ಕೆಂಪುಕಲ್ಲಿನ ಅನಧಿಕೃತ ಕ್ವಾರೆ ಹಲವು ವರ್ಷಗಳಿಂದ ತಲೆ ಎತ್ತಿವೆ. ಪ್ರತಿಯೊಂದು ಗಣಿಗಾರಿಕೆ ಪ್ರದೇಶವು ಸುಮಾರು 100 ಮೀ ಉದ್ದ, 150 ಮೀಟರ್ ಅಗಲ ಹಾಗೂ 50 ಮೀ. ಆಳವಿದೆ ಎಂದು ಅಂದಾಜಿಸಲಾಗಿದೆ. ಯಂತ್ರದ ಮೂಲಕ ಕೆಂಪು ಕಲ್ಲುಗಳನ್ನು ಕತ್ತರಿಸಿ ತೆಗೆಯಲಾಗುತ್ತಿದೆ. ಅಧಿಕಾರಿಗಳು ಜಾಣ ಕುರುಡು ಇಲ್ಲಿ ಎದ್ದು ಕಾಣುತ್ತಿದೆ.

ಇಲ್ಲಿ ಒಂದು ಕ್ವಾರೆಯಿಂದ ಪ್ರತಿದಿನ 3000ಕ್ಕೂ ಹೆಚ್ಚು ಕೆಂಪು ಕಲ್ಲುಗಳನ್ನು ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಒಂದು ಗಣಿಗಾರಿಕೆ ಪ್ರದೇಶದಿಂದ ದಿನಕ್ಕೆ ಲಕ್ಷ ಗಟ್ಟಲೇ ಆದಾಯ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಮೂಲಗಳು ಹೇಳುತ್ತವೆ. ಪ್ರಮುಖವಾಗಿ ಶರಾವತಿ ಸಿಂಗಳೀಕ ಅಭಯಾರಣ್ಯ ಹಾಗೂ ಅಂಬಾರಗುಡ್ಡ ಜೀವ ವೈವಿಧ್ಯ ವಲಯದ ಸನಿಹದಲ್ಲೆ ಇಂತಹ ಪರಿಸರ ವಿರೋಧಿ ಚಟುವಟಿಕೆ ನಡೆಯುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಹಿಂದೆ ಬಹು ದೊಡ್ಡ ಜಾಲ ಕೆಲಸ ಮಾಡುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಚನ್ನಗೊಂಡ ಗ್ರಾಮದಲ್ಲಿ ಅರಣ್ಯ ಭೂಮಿಯಲ್ಲಿ ಒತ್ತುವರಿ ಮಾಡಿರುವ ಬಗ್ಗೆ ಅರಣ್ಯ ಇಲಾಖೆ ರೈತರಿಗೆ ನೋಟಿಸ್ ನೀಡಿರುವ ಪ್ರಕರಣದ ನಡುವೆ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ವಿರುದ್ಧ ಯಾವುದೇ ನೋಟಿಸ್ ನೀಡದೆ ಇರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಇಬ್ಬಗೆಯ ನೀತಿ ವಿರುದ್ಧ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪತ್ತೆಯಾದರೂ ಸರಿಯಾಗಿ ಪ್ರಕರಣ ದಾಖಲಿಸದೇ ಇರುವುದು ಮತ್ತು ಕಾನೂನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಪರಿಸರ, ಜನ, ಜಾನುವಾರುಗಳಿಗೆ ಕಂಟಕವಾಗಿರುವ ಕಲ್ಲು ಗಣಿ ಮಾಫಿಯಾವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಕೆಳಹಂತದಿಂದ ರಾಜ್ಯಮಟ್ಟದವರೆಗೆ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು. ರಾಜ್ಯವ್ಯಾಪಿ ಕಲ್ಲು ಗಣಿ ಘಟಕಗಳ ಮೇಲೆ ನಿರಂತರ ನಿಗಾ ಇಡುವ ವ್ಯವಸ್ಥೆ ರೂಪಿಸುವ ಮೂಲಕ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮಟ್ಟಹಾಕಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.

Share this article