ಕಂಪ್ಲಿ: ಪಟ್ಟಣದಲ್ಲಿ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಪರಿಶೀಲನೆ ವೇಳೆ ಲಾರಿಯಲ್ಲಿ ಒಟ್ಟು 330 ಅಕ್ಕಿ ಮೂಟೆಗಳು ಪತ್ತೆಯಾಗಿದ್ದು, ಅವುಗಳ ಅಂದಾಜು ಮೌಲ್ಯ ಸುಮಾರು ₹3.80 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ದಾಖಲೆಗಳು ಹಾಗೂ ಸಾಗಾಣಿಕೆ ಸಂಬಂಧಿತ ಅನುಮತಿ ಪತ್ರಗಳನ್ನು ಚಾಲಕ ಹಾಗೂ ಸಂಬಂಧಪಟ್ಟವರು ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳು ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಪಡಿತರ ವ್ಯವಸ್ಥೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಬಡವರಿಗೆ ತಲುಪಬೇಕಾದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಾಗಣೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದಾಳಿಯಲ್ಲಿ ಆಹಾರ ನಿರೀಕ್ಷಕ ವಿರೂಪಾಕ್ಷಗೌಡ ಅವರೊಂದಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಬಿ. ವಾಸುಕುಮಾರ್, ಪೊಲೀಸ್ ಉಪನಿರೀಕ್ಷಕ ಟಿ. ಮಹಾಂತೇಶ್, ಸಿಬ್ಬಂದಿ ವಿಶ್ವನಾಥ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.