ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಆಡಳಿತ ಮಂಡಳಿಯ ಕೆಲವು ಪದಾಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಪ್ರಸ್ತುತ ಆಡಳಿತ ಮಂಡಳಿಯನ್ನು ವಜಾ ಮಾಡಿ, ಆಸ್ತಿಯನ್ನು ಮತ್ತೆ ಸಂಸ್ಥೆಯ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುವಂತೆ ಶುಕ್ರವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿ 55.70 ಚದರ ಮೀಟರ್ ಜಾಗಕ್ಕೆ ಮಾರುಕಟ್ಟೆಯಲ್ಲಿ ಕನಿಷ್ಠ ₹30 ಲಕ್ಷ ಬೆಲೆ ಇದ್ದರೂ, ಕೇವಲ ₹2 ಲಕ್ಷಕ್ಕೆ ನೋಂದಣಿ ಮಾಡಲಾಗಿದೆ. ಇದರಿಂದ ಪ್ರತಿ ಪ್ಲಾಟ್‌ಗೆ ಸುಮಾರು ₹28 ಲಕ್ಷ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕ್ರಮವು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 60 ಮತ್ತು 61ರ ಉಲ್ಲಂಘನೆಯಾಗಿದ್ದು, ಸರ್ಕಾರದ ಅನುದಾನ ಪಡೆಯುವ ಸಂಸ್ಥೆಯ ಆಸ್ತಿಯನ್ನು ಮಾರಾಟ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೇ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಪಿಟಿಟಿ) 1999ರ ನಿಯಮಗಳನ್ನು ಉಲ್ಲಂಘಿಸಿ ಬಹಿರಂಗ ಹರಾಜು ನಡೆಸದೇ ಆಸ್ತಿಯನ್ನು ಮಾರಾಟ ಮಾಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಆಡಳಿತ ಮಂಡಳಿಯ ಸದಸ್ಯರಾದ ಸಿದ್ಧಲಿಂಗಪ್ಪ ಹಳ್ಳಿಕೇರಿ ಹಾಗೂ ವೀರಣ್ಣ ಅರಳಿ ಸಭೆಯಲ್ಲಿ ಈ ಅಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರೂ, ಅವರ ಮಾತುಗಳನ್ನು ಇತರರು ಪರಿಗಣಿಸಿಲ್ಲ, ಇದಲ್ಲದೆ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಆಸ್ತಿ ವಿವರಗಳ ಮಾಹಿತಿಯನ್ನು ಸಂಸ್ಥೆಯ ಕಾರ್ಯದರ್ಶಿ ನೀಡಲು ನಿರಾಕರಿಸಿರುವುದರಿಂದ ಅನುಮಾನಗಳು ಇನ್ನಷ್ಟು ಗಾಢವಾಗಿವೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಆಡಳಿತ ಮಂಡಳಿ ವಜಾ ಮಾಡಬೇಕು, ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡಬೇಕು, ಅಕ್ರಮವಾಗಿ ಖರೀದಿಸಿದ ಆಸ್ತಿಗಳ ನೋಂದಣಿ ರದ್ದುಪಡಿಸಿ ಸಂಸ್ಥೆಯ ವಶಕ್ಕೆ ಪಡೆಯಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಸವರಾಜ ಮರಳಿಹಳ್ಳಿ, ಐ.ಜಿ. ಕೋರಿ, ಸಿ.ಕೆ. ಹಳ್ಳಿಕೇರಿ, ಎಂ.ಬಿ. ಮುಂಡರಗಿ, ನಿರಂಜನ ಪರಂಗಿ, ಸಿದ್ದಲಿಂಗಪ್ಪ ಕಲಕೋಟಿ, ಮುತ್ತಯ್ಯ ಕಿತ್ತೂರಮಠ, ಕೆ.ಸಿ. ಕೋರಿ, ಮಲ್ಲಣ್ಣ ಹಳ್ಳಿಕೇರಿ, ಸಿದ್ದಣ್ಣ ಹಳ್ಳಿಕೇರಿ, ರುದ್ರಪ್ಪ ಯತ್ನಳ್ಳಿ, ರವಿ ಚಂದ್ರಗಿರಿ, ಸಿದ್ದಲಿಂಗಪ್ಪ ರಾಚನಾಯ್ಕರ್, ಗುದ್ಲೆಪ್ಪ ಸವಣೂರ, ಆನಂದ ಮುರಡೆಪ್ಪನವರ, ಶಂಭಣ್ಣ ಶಾಬಳದ, ಬಿ.ಎಸ್. ದೊಡ್ಡಮನಿ, ಎಸ್.ಜಿ. ದೀಪಾಳಿ, ರವಿ ಗಾಣಗೇರ ಹಾಗೂ ಹೊಸರಿತ್ತಿ ಗ್ರಾಮಸ್ಥರು ಇದ್ದರು.