ಕೊಪ್ಪಳ: ಜಿಲ್ಲಾದ್ಯಂತ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದ್ದಾರೆ.
ಅಕ್ರಮ ಮರಳು ದಂಧೆಯ ಕುರಿತು ನಾವು ಪರಿಶೀಲನೆಗೆ ಹೋಗುತ್ತಿದ್ದಂತೆ ಅಲ್ಲಿಯೇ ಕೆಲ ಪೊಲೀಸರು ಮಾರುವೇಷದಲ್ಲಿರುವುದು ಕಂಡು ಬಂದಿದೆ. ಅವರೇ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮರಳು ದಂಧೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಂತೆ ಇದರ ಮಾಹಿತಿ ಅಲ್ಲಿರುವ ಪೊಲೀಸ್ ಸಿಬ್ಬಂದಿ ಅಥವಾ ಇನ್ಯಾರೋ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ, ಅಕ್ರಮ ಮರಳು ದಂಧೆಯ ವಿರುದ್ಧ ಧ್ವನಿ ಎತ್ತುವುದನ್ನು ತಡೆಯುವ ಕುತಂತ್ರವೂ ನಡೆದಿದೆ ಎಂದರು.ಹಿರೇಸಿಂದೋಗಿ ಬಳಿ ಅಕ್ರಮ ಮರಳು ದಂಧೆಯ ಕುರಿತು ದೂರು ನೀಡಿದ ಅಗತ್ಯ ಅಕ್ರಮ ವಹಿಸಿದ್ದರು. ಆಗ ತುರ್ತು ಕ್ರಮಕೈಗೊಂಡಿದ್ದರು. ಅದಾದ ಮೇಲೆ ಅದನ್ನು ನಿಯಂತ್ರಣ ಮಾಡುವಲ್ಲಿ ಮತ್ತೆ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಭೂ ವಿಜ್ಞಾನಿ ಪುಷ್ಪಾವತಿಯ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮ ಅನುಮಾನ ಬರುವಂತೆ ಮಾಡಿದೆ. ಕಳೆದ ತಿಂಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಬಂದ್ ಆಗಿತ್ತು, ಆಗ 69 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು, ಆದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಶಾಸಕರ ಬೆಂಬಲಿಗರು ಅಕ್ರಮ ಮರಳು ದಂಧೆ ನಡೆಸುತ್ತಾರೆ ಎನ್ನುವ ಆರೋಪವಿದ್ದು, ಈ ಕಾರಣಕ್ಕಾಗಿಯೇ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಮೆಕ್ಕೆಜೋಳ ದರ ಕುಸಿತವಾಗಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ದರದಲ್ಲಿ ಖರೀದಿ ಮಾಡಲು ಬೆಂಬಲ ಬೆಲೆ ಕೇಂದ್ರ ತೆರೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ ಆಕ್ರೋಶ ವ್ಯಕ್ತಪಡಿಸಿದರು.
ಕಂಠಯ್ಯ ಹಿರೇಮಠ ಹಾಗೂ ಗಣೇಶ ಹೊರತಟ್ನಾಳ ಇದ್ದರು.