ತುಂಗಭದ್ರಾ ದಡದಲ್ಲಿ ಅಕ್ರಮ ಮರಳು, ನಾಲ್ಕು ತೆಪ್ಪಗಳು ವಶ

KannadaprabhaNewsNetwork |  
Published : Jan 09, 2024, 02:00 AM IST
ಪೋಟೊ-೭ ಎಸ್.ಎಚ್.ಟಿ. ೧ಕೆ-ಅಕ್ರಮವಾಗಿ ಮರಳು ಸಂಗ್ರಹ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಅನಿಲ ಬಡಿಗೇರ, ಪಿಎಸ್‌ಐ ಈರಪ್ಪ ರಿತ್ತಿ ಮರಳನ್ನು ತಮ್ಮ ಸುಪರ್ದಿಗೆ ಪಡೆದಿರುವುದು. ೨ಕೆ- ಅಕ್ರಮ ಮರಳು ಸಂಗ್ರಹಕ್ಕೆ ಬಳಸಿದ ನಾಲ್ಕು ತೆಪ್ಪಗಳನ್ನು ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿ ವಷಕ್ಕೆ ಪಡೆದಿರುವುದು. | Kannada Prabha

ಸಾರಾಂಶ

ಶಿರಹಟ್ಟಿ ತಾಲೂಕಿನ ತೊಳಲಿ ಗ್ರಾಮದ ಹತ್ತಿರ ಇರುವ ತುಂಗಭದ್ರಾ ನದಿ ದಡದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ನದಿ ದಡದಲ್ಲಿ ದಾಸ್ತಾನು ಇರಿಸಿದ್ದ ಮರಳು (ಉಸುಕು) ಮತ್ತು ಕೃತ್ಯಕ್ಕೆ ಬಳಸಿದ ನಾಲ್ಕು ತೆಪ್ಪಗಳನ್ನು ಭಾನುವಾರ ತಹಸೀಲ್ದಾರ್‌ ಅನಿಲ ಬಡಿಗೇರ ನೇತೃತ್ವದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ತೊಳಲಿ ಗ್ರಾಮದ ಹತ್ತಿರ ಇರುವ ತುಂಗಭದ್ರಾ ನದಿ ದಡದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ನದಿ ದಡದಲ್ಲಿ ದಾಸ್ತಾನು ಇರಿಸಿದ್ದ ಮರಳು (ಉಸುಕು) ಮತ್ತು ಕೃತ್ಯಕ್ಕೆ ಬಳಸಿದ ನಾಲ್ಕು ತೆಪ್ಪಗಳನ್ನು ಭಾನುವಾರ ತಹಸೀಲ್ದಾರ್‌ ಅನಿಲ ಬಡಿಗೇರ ನೇತೃತ್ವದಲ್ಲಿ ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಮಾರು ದಿನಗಳಿಂದ ಅವ್ಯಾಹತವಾಗಿ ಅಕ್ರಮವಾಗಿ ಕಳ್ಳತನದಿಂದ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಭಾನುವಾರ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ತುಂಗಭದ್ರಾ ನದಿ ದಡದ ಸ್ವಲ್ಪ ಒಳಗೆ ನಾಲ್ಕು ತೆಪ್ಪಗಳ ಸಹಾಯದಿಂದ ಅಕ್ರಮ ಮರಳು ತೆಗೆಯುತ್ತಿದ್ದ ೮-೧೦ ಜನರು ಅಧಿಕಾರಿಗಳನ್ನು ನೋಡಿ ಓಡಿ ಹೋಗಿದ್ದಾರೆ.

ಶಿರಹಟ್ಟಿ ತಾಲೂಕಿನ ಹೊಳೆ-ಇಟಗಿ, ಹೆಬ್ಬಾಳ, ತಂಗೋಡ, ತೊಳಲಿ, ಕಲ್ಲಾಗನೂರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಮರಳು ಮಾಫಿಯಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ಅಕ್ರಮ ಮರಳು ದಂದೆಕೋರರು ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳು ದಂಧೆಕೋರರು ವರ್ತಿಸುತ್ತಿದ್ದು, ನದಿ ಪಾತ್ರ, ಹಳ್ಳಕೊಳ್ಳಗಳ ಪ್ರದೇಶಗಳು ಮರಳು ಮಾಫಿಯಾಗಳ ಅಡ್ಡೆಯಾಗಿ ಬದಲಾವಣೆಗೊಂಡಿವೆ.

ತಾಲೂಕಿನಲ್ಲಿ ಅಕ್ರಮ ಮರಳುದಂಧೆ ನಡೆಸುವ ಕುಳಗಳು ತಮ್ಮ ಕೆಲಸಗಾರರಿಗೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಬರುವ ಸುಳಿವು ನೀಡುವಂತೆ ಮೊಬೈಲ್ ಪೋನ್ ಮತ್ತು ಹೆಚ್ಚಿನ ಸಂಬಳ ನೀಡಿ ನಿತ್ಯ ಹಗಲು ರಾತ್ರಿ ಎನ್ನದೆ ಕಾವಲು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ದೂರುಗಳು ಗ್ರಾಮಸ್ಥರಿಂದ ಕೇಳಿಬರುತ್ತಿದ್ದು, ಭಾನುವಾರ ಅಧಿಕಾರಿಗಳ ದಾಳಿಯಿಂದ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ.

ಮರಳುಗಾರಿಕೆ ಮಾಡುವವರು ಇದೀಗ ರೈತರ ಜಮೀನು ಒತ್ತೆಯಾಗಿ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್ ಇಲಾಖೆಗಳ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಬೇಕಾ ಬಿಟ್ಟಿ ಕೃಷಿ ಜಮೀನಿನಲ್ಲಿಯೂ ಮರಳು ಎತ್ತುತ್ತಿದ್ದಾರೆ. ಶಿರಹಟ್ಟಿ ತಾಲೂಕಿನ ತೊಳಲಿ, ಕಲ್ಲಾಗನೂರ ವ್ಯಾಪ್ತಿಯಲ್ಲಿಯ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಬಳಸಿ ಸಂಗ್ರಹಿಸಿರುವ ಮರಳನ್ನು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಗುರುತಿಸಿ ನಿಯಮಾನುಸಾರ ವಿಲೇವಾರಿಗೊಳಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳುತ್ತಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ