ಈ ಅಕ್ರಮದ ಬಗ್ಗೆ ಯಾವೊಬ್ಬ ಅಧಿಕಾರಿಗಳು ಪ್ರಶ್ನಿಸುವಂತಿಲ್ಲ, ಆ ಧೈರ್ಯವೂ ಅಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗಿಲ್ಲ. ಈ ಅಕ್ರಮ ದಂಧೆಕೋರರು ಇಷ್ಟೊಂದು ಪ್ರಭಾವಶಾಲಿಗಳಾಗಿದ್ದಾರೆ.
ಶಿವಕುಮಾರ ಕುಷ್ಟಗಿ
ಗದಗ: ಬಾಗಲಕೋಟೆ ಜಿಲ್ಲೆಯ ಮರಳನ್ನು ಅಕ್ರಮವಾಗಿ ಗದಗ ಜಿಲ್ಲೆಯ ಮೂಲಕ ಹುಬ್ಬಳ್ಳಿ- ಧಾರವಾಡಕ್ಕೆ ಸಾಗಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಅವ್ಯಾಹತವಾಗಿ ನಡೆದಿದೆ.
ರೋಣ ತಾಲೂಕಿನ ಮೆಣಸಗಿ ಗ್ರಾಮದ ನದಿ ಪಕ್ಕದಲ್ಲಿರುವ ಜಮೀನುಗಳಲ್ಲಿನ ಜಿಲ್ಲಾ ಸರಹದ್ದನ್ನು (ಗದಗ, ಬಾಗಲಕೋಟೆ ಜಿಲ್ಲೆಗಳನ್ನು ಬೇರ್ಪಡಿಸುವ) ಬಳಕೆ ಮಾಡಿಕೊಂಡು (ಪಟ್ಟಾ ಬೂಮಿಯಲ್ಲಿ) ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ.
ಈ ಅಕ್ರಮದ ಬಗ್ಗೆ ಯಾವೊಬ್ಬ ಅಧಿಕಾರಿಗಳು ಪ್ರಶ್ನಿಸುವಂತಿಲ್ಲ, ಆ ಧೈರ್ಯವೂ ಅಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗಿಲ್ಲ. ಈ ಅಕ್ರಮ ದಂಧೆಕೋರರು ಇಷ್ಟೊಂದು ಪ್ರಭಾವಶಾಲಿಗಳಾಗಿದ್ದಾರೆ.
ಅಧಿಕಾರಿಗಳ ಕಣ್ಣಿಗೆ ಮಣ್ಣು: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಗಾಗಿ ಅನುಮತಿ ಪಡೆದಿರು ಕೆಲವರು, ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ಸುತ್ತಮುತ್ತಲು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತ ಆ ಮರಳನ್ನು ಗದಗ ಜಿಲ್ಲೆಯ ಮೂಲಕ ಧಾರವಾಡ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದಾರೆ.
ಈ ವಿಷಯವಾಗಿ ಗದಗ ಜಿಲ್ಲೆಯ ಅಧಿಕಾರಿಗಳು ಕೇಳಿದರೆ ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ, ನಿಮ್ಮ ವ್ಯಾಪ್ತಿಯಲ್ಲಿ ಇಲ್ಲ ಎನ್ನುತ್ತಾರೆ. ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳು ಪ್ರಶ್ನೆ ಮಾಡಿದರೆ, ನಿಮ್ಮ ಜಿಲ್ಲೆಯಲ್ಲಿ ಸಾಗಾಟ ಮಾಡುವುದಿಲ್ಲ, ಇದು ಗದಗ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಲೇ ಎರಡೂ ಜಿಲ್ಲೆಯ ಅಧಿಕಾರಿಗಳ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಪ್ರಭಾವಿಗಳು ಶಾಮೀಲು: ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಮಲಪ್ರಭಾ ನದಿ ಅಕ್ಕಪಕ್ಕದ ಗ್ರಾಮಗಳು ಹಾಗೂ ಬೃಹತ್ ಹಳ್ಳಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರದ್ದೇ ಸಿಂಹಪಾಲಿದೆ. ಅದರಲ್ಲಿಯೂ ಕೆಲವರಂತೂ ನಮ್ಮದೇ ಸರ್ಕಾರವಿದೆ. ನಮ್ಮನ್ನು ಕೇಳುವವರು ಯಾರು? ಕಾರ್ಯಕರ್ತರನ್ನು ಬೆಳೆಸದೇ ಬೇರೆ ಯಾರನ್ನು ಬೆಳೆಸುತ್ತಾರೆ ಎಂದು ಪ್ರಶ್ನಿಸುವ ಅಧಿಕಾರಿಗಳ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು. ರಾಜಧನ ನಷ್ಟ: ಈ ಅಕ್ರಮ ಮರಳು ಸಾಗಾಟದಿಂದ ಸರ್ಕಾರಕ್ಕೆ ಲಕ್ಷಾಂತರ ನಷ್ಟ ಆಗುತ್ತಿದೆ. ಮರಳು ಪಾಯಿಂಟ್ ನಲ್ಲಿ ವೇಬ್ರಿಡ್ಜ್ ಇಲ್ಲದ ಕಾರಣ ಹೆಚ್ಚುವರಿ ತುಂಬುವ ಮರಳಿನ ಲೆಕ್ಕ ಇಲ್ಲವಾಗಿದೆ. ಟ್ರಿಪ್ ಲಾರಿಯಲ್ಲಿ 18ರಿಂದ 24 ಟನ್ ವರೆಗೆ ಮರಳು ತುಂಬುತ್ತಿದ್ದು, ಮರಳು ಪಾಸಿನಲ್ಲಿ ಕೇವಲ 10 ಟನ್ ಮಾತ್ರ ಎಂಟ್ರಿ ಮಾಡುತ್ತಿದ್ದಾರೆ.
ಹೀಗಾಗಿ ಪ್ರತಿ ಲಾರಿ ಮರಳಿನಲ್ಲಿ ಹೆಚ್ಚುವರಿ ಸರಾಸರಿ 15 ಟನ್ ಮರಳಿನ ರಾಜಧನ ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಪ್ರತಿದಿನ ಅಂದಾಜು 70ರಿಂದ 100 ಲಾರಿ ಮರಳಿನಿಂದ ಅಂದಾಜು ನಿತ್ಯ ₹2 ಲಕ್ಷ ನಷ್ಟ ಆಗುತ್ತಿದ್ದು, ಇದು ಕೇವಲ ಒಂದು ಸ್ಯಾಂಡ್ ಪಾಯಿಂಟ್ ನಿಂದ. ಈ ರೀತಿಯ ಹತ್ತಾರು ಸ್ಯಾಂಡ್ ಪಾಯಿಂಟ್ ಗಳಿದ್ದು, ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ.ಗೊತ್ತಿಲ್ಲ ಎನ್ನುವ ಅಧಿಕಾರಿಗಳುಗಣಿ ಇಲಾಖೆ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯ ಬಗ್ಗೆ ಏನೇ ಕೇಳಿದರೂ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಪೊಲೀಸ್ ಇಲಾಖೆ ಅಧಿಕಾರಿಗಳಂತೂ ಅಂತಹದ್ದು ನಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ ಎನ್ನುತ್ತಾರೆ. ಆರ್‌ಟಿಒ ಅಧಿಕಾರಿಗಳು ಒವರ್ ಲೋಡ್ ಬಗ್ಗೆ ಕೇಳಿದರೆ, ಅದು ನಡೆದೇ ಇಲ್ಲ ಎನ್ನುತ್ತಿರುವುದು ಕೂಡಾ ಹಲವು ಸಂಶಯಕ್ಕೆ ಕಾರಣವಾಗಿದೆ.
ಸೂಕ್ತ ಕ್ರಮ: ಈ ಕುರಿತು ಪರಿಶೀಲನೆ ನಡೆಸಲು ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗುವುದು. ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ನಾಗಭೂಷಣ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.