ದೇವದುರ್ಗದಲ್ಲಿ 10 ಕೋಟಿಗೂ ಅಧಿಕ ಅಕ್ರಮ ಮರಳು ದಾಸ್ತಾನು

KannadaprabhaNewsNetwork | Published : Dec 25, 2024 12:49 AM

ಸಾರಾಂಶ

ಮರಳು ಮಾಫೀಯಾದ ಮೂಲ ವ್ಯಕ್ತಿಗಳನ್ನು ಬಂಧಿಸಲು ಎಸ್‌ಪಿಗೆ ದೂರು

ಕನ್ನಡಪ್ರಭ ವಾರ್ತೆ ದೇವದುರ್ಗ:

ತಾಲೂಕಿನ ಕರ್ಕಿಹಳ್ಳಿ ನದಿ ಪಾತ್ರದಲ್ಲಿ ಮರಳು ಮಾಫಿಯಾ ಸುಮಾರು 10 ಕೋಟಿಗೂ ಧಿಕ ಮೊತ್ತದ ಮರಳು ದಾಸ್ತಾನು ಮಾಡಲಾಗಿದೆ. ಈಗಾಗಲೇ ಜಪ್ತಿ ಕೂಡ ಮಾಡಲಾಗಿದೆ. ಆದರೆ ಮರಳು ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಮೂಲ ಕಿಂಗ್ಪಿನ್‌ಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮುಖಂಡ ಬಸವರಾಜ ನಾಯಕ ಕೊತ್ತದೊಡ್ಡಿ ಒತ್ತಾಯಿಸಿದ್ದಾರೆ.

ರಾಯಚೂರು ಎಸ್‌ಪಿ ಕಚೇರಿಯಲ್ಲಿ ಎಸ್‌ಪಿ ಎಂ.ಪುಟ್ಟಮಾದಯ್ಯರಿಗೆ ಸೋಮವಾರ ಮನವಿ ಸಲ್ಲಿಸಿ, ಜಿಲ್ಲಾ ಮತ್ತು ತಾಲೂಕು ಮರಳು ನಿರ್ವಹಣಾ ಸಮಿತಿಗಳ ಕರ್ತವ್ಯ ಲೋಪ ಮತ್ತು ಹಟ್ಟಿ ಗೋಲ್ಡ್ ಮೈನ್ಸ್ ಹೆಸರಲ್ಲಿ ಹೊಸ ಸ್ಟಾಕ್ ಯಾರ್ಡ್‌ ಸ್ಥಾಪಿಸಿ, ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವ ಕುರಿತು ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದರು.

ಜಿಲ್ಲಾ ಭೂವಿಜ್ಞಾನ ಗಣಿ ಅಧಿಕಾರಿ ಪುಷ್ಪಲತಾ ಕೆಡಿಪಿ ಸಭೆಗೆ ತಪ್ಪು ಮಾಹಿತಿ ನೀಡಿದ್ದೂ ಕೂಡ ಇದೀಗ ಬಹಿರಂಗಗೊಂಡಿದೆ. ಚಿನ್ನದ ಗಣಿಯ ಅಧಿಕಾರಿಗಳ ಹೇಳಿಕೆ ನೀಡಿರುವ ವರದಿಗಳು ಅನುಮಾನಾಸ್ಪದವಾಗಿವೆ. ಅಮಾಯಕ ರೈತರ ಮೇಲೆ ಪ್ರಕರಣಗಳು ದಾಖಲಾಗುತ್ತಿದ್ದು, ಆದರೆ ಅಕ್ರಮ ಮರಳು ದಾಸ್ತಾನು ಹಾಗೂ ಸಾಗಾಣಿಕೆಯಂತಹ ಪ್ರಕರಣಗಳಲ್ಲಿ ಆರೋಪಿಗಳ ರಕ್ಷಣೆಗೆ ಅಧಿಕಾರಿಗಳು ನಿಂತಿದ್ದಾರೆ. ಮರಳು ದಾಸ್ತಾನಿನ ರಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದರು. ಈ ಅಕ್ರಮ ಮರಳು ದಾಸ್ತಾನು ಹಗರಣದಲ್ಲಿ ಶಾಮೀಲಾಗಿರುವ ತಹಸೀಲ್ದಾರ, ಜಿಲ್ಲಾ ಭೂವಿಜ್ಞಾನ ಅಧಿಕಾರಿ ಹಾಗೂ ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳ ಮೇಲೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ಒಳಪಡಿಸಬೇಕೆಂದು ಬಸವರಾಜ ನಾಯಕ ಕೊತ್ತದೊಡ್ಡಿ ಒತ್ತಾಯಿಸಿದ್ದಾರೆ. ----ಪೋಟೋ ಕ್ಯಾಪ್ಶನ್: 24ಕೆಪಿಡಿವಿಡಿ02:

ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಅಕ್ರಮ ಮರಳು ತನಿಖೆ ನಡೆಸಬೇಕು ಎಂದು ಮುಖಂಡ ಬಸವರಾಜ ನಾಯಕ ಕೊತ್ತದೊಡ್ಡಿ ಎಸ್ಪಿ ಎಂ.ಪುಟ್ಟಮಾದಯ್ಯ ಅವರಿಗೆ ದೂರು ಸಲ್ಲಿಸಿದರು.

Share this article