ಶಿವಕುಮಾರ ಕುಷ್ಟಗಿ
ಗದಗ: ನಗರದ ಅಕ್ಕಪಕ್ಕದಲ್ಲಿರುವ ಅತ್ಯುತ್ತಮ ಕೆಂಪು ಕಲ್ಲು ಮಿಶ್ರಿತ ಮಣ್ಣಿಗಿರುವ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಗಣಿ ಮತ್ತು ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ವ್ಯಾಪಕ ಪ್ರಮಾಣದ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ.ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಜಮೀನು, ಕರ್ನಾಟಕ ಗೃಹ ಮಂಡಳಿಯ ಜಮೀನು, ಅಕ್ಕಪಕ್ಕ ಇರುವ ಕೆಲವು ಖಾಸಗಿ ಜಮೀನು ಹಾಗೂ ಕಳಸಾಪುರ, ಬೆಳದಡಿ, ನಭಾಪುರ ಗುಡ್ಡಗಳ ಅಕ್ಕಪಕ್ಕದಲ್ಲಿರುವ ಜಾಗದಲ್ಲಿ ಕೆಲವರು ಅಕ್ರಮ ಗಣಿಗಾರಿಕೆಯನ್ನು ಅವ್ಯಾಹತವಾಗಿ ನಡೆಸುತ್ತಲೇ ಬಂದಿದ್ದಾರೆ.
ಗ್ರಾಮೀಣ ವಿವಿ ಕುಲಸಚಿವರ ಮೇಲೆ ಪ್ರಕರಣ: ಗದಗ ನಗರದ ಸಮೀಪದ ನಾಗಾವಿ ಗುಡ್ಡದ 300ಕ್ಕೂ ಅಧಿಕ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗಿದೆ. ಆದರೆ ವಿವಿ ನಿರ್ಮಾಣದ ಆನಂತರ ಸಾಕಷ್ಟು ಭೂಮಿ ಖಾಲಿ ಉಳಿದಿದೆ. ಅದನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ವಿವಿಯದ್ದಾಗಿದೆ. ಆದರೆ ವಿವಿ ಜಮೀನಿನಲ್ಲಿಯೇ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಕುರಿತು ಗಣಿ ಇಲಾಖೆಗೆ ಕ್ರಮಕ್ಕಾಗಿ ಬರೆದು ಕೈ ತೊಳೆದುಕೊಳ್ಳುತ್ತಿದ್ದ ವಿವಿ ಅಧಿಕಾರಿಗಳಿಗೆ ಗಣಿ ಇಲಾಖೆ ಈಗ ಬಿಸಿ ಮುಟ್ಟಿಸಿದೆ. ನಿಮ್ಮ ಆಸ್ತಿ ನೀವು ಕಾಪಾಡಿಕೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲ, ಈಗ ವಿವಿಯ ಕುಲಸಚಿವರ ವಿರುದ್ಧವೇ ಪ್ರಕರಣ ದಾಖಲಿಸಿದೆ.ಗೃಹ ಮಂಡಳಿ ಅಧಿಕಾರಿಗಳ ಮೇಲೆ ಪ್ರಕರಣ: ಗದಗ ತಾಲೂಕಿನ ಕಳಸಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆಯಲ್ಲಿ ಕರ್ನಾಟಕ ಗೃಹ ಮಂಡಳಿ ನಿವೇಶನ ನಿರ್ಮಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಿದೆ. ಹೀಗೆ ನಿವೇಶನ ಸಿದ್ಧ ಮಾಡುವ ವೇಳೆಯಲ್ಲಿ ಹಲವಾರು ಎಕರೆ ಭೂಮಿ ಹಾಗೆಯೇ ಉಳಿದಿದೆ. ಈಗ ಅದೇ ಪ್ರದೇಶದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ತಡೆಯುವಂತೆ ಕಳಸಾಪುರ ಗ್ರಾಪಂ, ಗಣಿ ಇಲಾಖೆಗೆ, ಗಣಿ ಇಲಾಖೆ ಗೃಹ ಮಂಡಳಿಗೆ, ಗೃಹ ಮಂಡಳಿ ಮತ್ತೆ ಗ್ರಾಪಂಗೆ ಪತ್ರ ಬರೆದಿದೆ. ಹೀಗೆ ಪರಸ್ಪರ ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸುತ್ತ ಕಾಲಕರಣ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ಅಲ್ಲಿದ್ದ ಅಪಾರ ಪ್ರಮಾಣ ಮಣ್ಣನ್ನು ಬಗೆದು ಮಾರಾಟ ಮಾಡಿದ್ದಾರೆ. ಜಿಲ್ಲಾಧಿಕಾರಿ ಖಡಕ್ ಸೂಚನೆ ಆನಂತರ ಎಚ್ಚೆತ್ತ ಗಣಿ ಇಲಾಖೆ ಅಧಿಕಾರಿಗಳು ಜಮೀನಿನ ಮಾಲೀಕರಾದ ಗೃಹ ಮಂಡಳಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.₹36.83 ಲಕ್ಷ ದಂಡ: ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಎಲ್ಲ ರೀತಿಯ ಗಣಿಗಾರಿಕೆ ವಿಷಯವಾಗಿ ಮೇ ತಿಂಗಳಲ್ಲಿ ಒಟ್ಟು 17 ಪ್ರಕರಣ ದಾಖಲಿಸಲಾಗಿದೆ. ಸಾಗಾಣಿಕೆಗೆ ಸಂಬಂಧಿಸಿದಂತೆ 273 ಪ್ರಕರಣ ಪತ್ತೆ ಹಚ್ಚಿ ₹37.26 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅಕ್ರಮ ದಾಸ್ತಾನು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪ್ರಕರಣಗಳ ಪತ್ತೆ ಮಾಡಿ ಒಂದು ದೂರು ದಾಖಲಿಸಲಾಗಿದೆ. ₹36.83 ಲಕ್ಷ ದಂಡ ವಿಧಿಸಲಾಗಿದೆ.
62 ಪ್ರಕರಣಗಳ ವಿಚಾರಣೆ: 2023-24ನೇ ಸಾಲಿನಲ್ಲಿ ಗಣಿಗಾರಿಕೆ ಸಂಬಂಧ 49 ಪ್ರಕರಣ, ಸಾಗಾಣಿಕೆಗೆ ಸಂಬಂಧಿಸಿದಂತೆ 398 ಪ್ರಕರಣ ಪತ್ತೆ ಹಚ್ಚಿ 18 ದೂರು ದಾಖಲಿಸಿ, ಒಟ್ಟು ₹1.84 ಕೋಟಿ ದಂಡ ಸಂಗ್ರಹಿಸಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಇದರೊಟ್ಟಿಗೆ ಒಟ್ಟು 62 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಗ್ರಾಮೀಣಾಭಿವೃದ್ಧಿ ವಿವಿ ಹಾಗೂ ಗೃಹ ಮಂಡಳಿಗೆ ಸೇರಿದ ಜಾಗದ ರಕ್ಷಣೆ ಆಯಾ ಸಂಸ್ಥೆಗೆ ಸೇರಿದ್ದು. ಅಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೆ ಅದಕ್ಕೆ ಆಯಾ ಸಂಸ್ಥೆಗಳೇ ಹೊಣೆ. ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ವಿವಿ ಕುಲಸಚಿವರು, ಗೃಹ ಮಂಡಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಯಾವ ಆಸ್ತಿಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆಯೋ ಆಯಾ ಆಸ್ತಿಗಳ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಯಾವುದೇ ಉದಾಸೀನ ಮಾಡದೇ ಕೆಲಸ ಮಾಡಲಾಗುತ್ತಿದೆ ಎಂದು ಗದಗ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಚಿದಂಬರಂ ಹೇಳುತ್ತಾರೆ.