ಹರಿಹರ: ತಾಲೂಕಿನ ಹಲವೆಡೆ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ತಾಲೂಕು ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ಅಕ್ರಮ ಮಣ್ಣುಗಾರಿಕೆ ತಡೆಯಲು ಆಗ್ರಹಿಸಿ ಸಂಘಟನೆಯಿಂದ ಡಿ.4 ರಂದು ಹರಿಹರ ತಹಶೀಲ್ದಾರರಿಗೆ ಮನವಿ ನೀಡಲಾಗಿತ್ತು. ಆ ಮನವಿ ನೀಡಿದ ನಂತರ ಮುಂಚೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ನಡೆಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸದ್ಯಕ್ಕೆ ತಾಲೂಕಿನ ಗುತ್ತೂರು, ಸಾರಥಿ, ಕುರುಬರಹಳ್ಳಿ, ಹರ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಜೆಸಿಬಿ, ಇಟಾಚಿ, ಡೋಜರ್ ಯಂತ್ರಗಳ ಮೂಲಕ ದಿನದ 24 ಗಂಟೆ ಮಣ್ಣು ಅಗೆಯುತ್ತಿದ್ದಾರೆ. ನೂರಾರು ಲಾರಿಗಳಲ್ಲಿ ಮಣ್ಣು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ದೂರಿದ್ದಾರೆ.
ಈಗಾಗಲೆ ಈ ಭಾಗದ ಪಟ್ಟಾ ಜಮೀನುಗಳಲ್ಲಿ 15 ರಿಂದ 25 ಅಡಿ ಆಳಕ್ಕೆ ತೋಡಿದ್ದು, ಮತ್ತೆ ಮಣ್ಣು ತೋಡುವ ಕೆಲಸ ನಡೆಯುತ್ತಿದೆ. ಲಾರಿಗಳ ಸಂಚಾರದಿಂದ ಗುತ್ತೂರು, ಸಾರಥಿ, ಹರ್ಲಾಪುರದ ಜನತೆ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ. ಲಾರಿಗಳ ಸಂಚಾರದಿಂದ ಎಳುತ್ತಿರುವ ಧೂಳು ಸಾವಿರಾರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮಸ್ಥರೂ ಕೂಡ ಬೇಸತ್ತಿದ್ದು, ಮಣ್ಣು ಲಾಬಿ ಮಡುವವರಿಂದ ಹೆದರಿ ಮೌನವಹಿಸಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.ಈಗ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಸಾವಿರಾರು ಎಕರೆ ಕೃಷಿ ಪಟ್ಟಾ ಜಮೀನು ದುರಸ್ತಿ ಮಾಡಲಾಗದ ದುಸ್ಥಿತಿಗೆ ತಲುಪುತ್ತಿದೆ. ಜಮೀನುಗಳ ರಕ್ಷಣೆಗೆ ಇರುವ ವಿವಿಧ ಇಲಾಖೆಯ ನಿಯಮ, ನಿಬಂಧನೆಗಳು ಪುಸ್ತಕಕ್ಕೆ ಸೀಮಿತವಾಗಿವೆ ಎಂದು ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಇದಕ್ಕೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರೊಂದಿಗೆ ನದಿ ದಡದ ಈ ಗ್ರಾಮಗಳಿಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.----09 ಎಚ್‍ಆರ್‍ಆರ್ 02ಹರಿಹರದ ಗುತ್ತೂರು ಗ್ರಾಮದಲ್ಲಿ 10 ವ್ಹೀಲರ್ ಲಾರಿಗಳಲ್ಲಿ ಅಕ್ರಮ ಮಣ್ಣು ಸಾಗಣೆ ನಡೆಯುತ್ತಿರುವುದು.