ಪಡಿತರ ಅಕ್ಕಿ ಅಕ್ರಮ ದಾಸ್ತಾನು: ಅಧಿಕಾರಿಗಳ ದಾಳಿ

KannadaprabhaNewsNetwork | Published : May 15, 2024 1:32 AM

ಸಾರಾಂಶ

ಶಹಾಪುರ ನಗರದ ಸ್ಲಂ ಬೋರ್ಡ್ ಮನೆಯಂದರಲ್ಲಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಪಡಿತರ ಅಕ್ಕಿ.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಸ್ಲಂ ಬೋರ್ಡ್ ಮನೆಯೊಂದರಲ್ಲಿ ಒಂಟಿ ಸೈಯದ್ ಎನ್ನುವ ವ್ಯಕ್ತಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಕುರಿತು ಆಹಾರ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ಮನೆ ಮೇಲೆ ದಾಳಿ ಮಾಡಿ, 15 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.ಬಡ ಜನರ ಹೊಟ್ಟೆ ತುಂಬಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳ ಮೂಲಕ ಅಕ್ಕಿ ನೀಡುತ್ತದೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ.

ಅಕ್ರಮವಾಗಿ ಪಡಿತರ ಆಹಾರ ಧಾನ್ಯ ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ ಜಾಲ ಎಗ್ಗಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಅಕ್ಕಿ ತುಂಬಿದ ಲಾರಿ ಪ್ರಕರಣ ಹಾಗೂ ಇತ್ತೀಚೆಗೆ ರಾಜ್ಯವೇ ಬೆಚ್ಚಿ ಬಿಳಿಸುವಂತಹ 6,077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣ ಮಾಸುವ ಮುನ್ನವೇ ತಾಲೂಕಿನಲ್ಲಿ ಹಲವು ಕಡೆ ಅಕ್ರಮ ಅಕ್ಕಿ ದಂಧೆಗೆ ಕಡಿವಾಣ ಬೀಳದೆ ಕಾಳ ಸಂಖ್ಯೆ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಅದನ್ನು ತಡೆಯುವಲ್ಲಿ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಸಾಗರ್ ಆರೋಪಿಸಿದ್ದಾರೆ.

-ಅಕ್ರಮ ಅಕ್ಕಿಯ ಮಾಫಿಯಾ ಗ್ಯಾಂಗ್ ಬಂಧನಕ್ಕೆ ಆಗ್ರಹ :

ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಅಕ್ಕಿ ಬಡವರ ಹೊಟ್ಟೆ ತುಂಬಿಸದೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾಟಾಚಾರಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಪದಲ್ಲಿ ದಾರಿ ತಪ್ಪಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಅನುಮಾನವಿದೆ. ಇದರ ಹಿಂದೆ ಇರುವ ಅಕ್ರಮ ಅಕ್ಕಿಯ ಮಾಫಿಯಾ ಗ್ಯಾಂಗ್ ಮತ್ತು ಈ ಪ್ರಕರಣದ ಆರೋಪಿಯನ್ನು ಬಂಧಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಅಕ್ಕಿ ಸಂಗ್ರಹಿಸಿ ಇಡಲಾಗಿದ್ದ ಮನೆಯನ್ನು ಪೊಲೀಸರ ಸಮಕ್ಷಮದಲ್ಲಿ ಪಂಚಿನಾಮೆ ನಡೆಸಿ 45 ಸಾವಿರ ರು. ಮೊತ್ತದ 50 ಕೆಜಿಯ 30 ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಜಂಬಯ್ಯ ಸ್ವಾಮಿ ತಿಳಿಸಿದ್ದಾರೆ.

---

ಬಾಕ್ಸ್‌

ಹಲವರಿಂದ ಬೆದರಿಕೆ ಕರೆ: ಭೀಮ್ಮಣ್ಣಗೌಡ

ಶಹಾಪುರ: ಗೂಡ್ಸ್ ಆಟೋ ಮತ್ತು ಪೆಟ್ರೋಲ್ ಆಟೋದಲ್ಲಿ ದಿನನಿತ್ಯ ಬೇರೆ ಕಡೆಯಿಂದ ಅಕ್ಕಿ ತಂದು ಇಲ್ಲಿ ಸಂಗ್ರಹಿಸುತ್ತಿದ್ದು ನಮ್ಮ ಗಮನಕ್ಕೆ ಬಂದ ಕೂಡಲೇ ಆರು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ ಅಧಿಕಾರಿಗಳು ಬರುತ್ತಿದ್ದಂತೆ ನನಗೆ ಕೆಲ ವ್ಯಕ್ತಿಗಳು ಫೋನ್ ಕರೆ ಮಾಡಿ ಇದೊಂದ್ ಸಲ ಈ ಪ್ರಕರಣ ದಾಖಲಿಸಬೇಡಿ ಕೈ ಬಿಟ್ಟು ಬಿಡುವಂತೆ ಒತ್ತಡ ಹಾಕುತ್ತಿದ್ದಾರೆ. ಬೇರೆ ಕಡೆ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಬಡವರು ಹೊಟ್ಟೆಪಾಡಿಗಾಗಿ ಇದನ್ನು ಮಾಡಿದ್ದಾರೆ. ನಿಮಗೆ ತಾಕತ್ತಿದ್ದರೆ ದೊಡ್ಡ ಪ್ರಕರಣಗಳು ಹಿಡಿಯಿರಿ ಎಂದು ಬೆದರಿಕೆ ಕರೆಗಳು ಬರುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭೀಮಣ್ಣಗೌಡ ಕಟ್ಟಿಮನಿ ತಿಳಿಸಿದ್ದಾರೆ.

ಜಿಲ್ಲೆ, ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ಕಾಳಸಂತೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ಕಿ ಸಂಗ್ರಹಿಸಿದ ಸ್ಥಳಕ್ಕೆ ಆಗಮಿಸಿದ ಮಲ್ಲಿಕ್‌ ಎನ್ನುವ ವ್ಯಕ್ತಿ ಬಂದು ಇದನ್ನು ಇಲ್ಲಿಗೆ ಕೈಬಿಡಿ ಕೇಸ್ ದಾಖಲಿಸಬೇಡಿ ಬಡವರಿದ್ದಾರೆ ಎಂದಿದ್ದಾರೆ. ಮಲ್ಲಿಕ್‌ನಿಗೂ ಈ ಅಕ್ಕಿ ಪ್ರಕರಣಕ್ಕೂ ಏನು ಸಂಬಂಧ? ಇಲ್ಲಿಗೆ ಬರಲು ಅವರ್ಯಾರು.

-ಭೀಮಣ್ಣ ಟಪ್ಪೇದಾರ್, ಅಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ ಶಹಾಪುರ

ಸ್ಲಂ ಬೋರ್ಡ್ ಮನೆಯಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎನ್ನುವ ಖಚಿತ ಮಾಹಿತಿ ಬಂದಿದ್ದು ಅದರಂತೆ ಪೊಲೀಸರ ಸಮಕ್ಷಮದಲ್ಲಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಅಕ್ಕಿಯನ್ನು ತಪಾಸಣೆ ಮಾಡಲಾಗಿದ್ದು, ಇದು ಪಡಿತರ ಅಕ್ಕಿ ಎಂದು ದೃಢಪಟ್ಟಿದೆ. ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗುವುದು.

-ಸಿ.ಎಸ್.ರಾಜು, ಫುಡ್ ಇನ್ಸ್ಪೆಕ್ಟರ್ ಆಹಾರ ಇಲಾಖೆ ಶಹಾಪುರ

Share this article