ಗುತ್ತಲ: ಅಕ್ರಮವಾಗಿ ಮರಳು ಸಾಗಾಟ ಮಾಡುವ ಲಾರಿ, ಟ್ರ್ಯಾಕ್ಟರ್ ಹಾಗೂ ಲಾರಿ ಚಾಲಕನನ್ನು ಹಿಡಿದು ದೂರು ದಾಖಲಿಸಲಾಗಿದೆ ಎಂದು ಗುತ್ತಲ ಪೊಲೀಸ್ ಠಾಣೆಯ ಪಿಎಸ್‌ಐ ರಾಜು ಟಿ. ಹೇಳಿದರು.ಸಮೀಪದ ಹೊಸಕಿತ್ತೂರ ಮತ್ತು ಹೊಸರಿತ್ತಿ ರಸ್ತೆ ಬಳಿಯ ಹೊಸಕಿತ್ತೂರ ಬಸ್ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಸುಮಾರು 3 ಕ್ಯೂಬಿಕ್‌ಗೂ ಅಧಿಕ ಮರಳನ್ನು ಸಾಗಿಸುವ ಲಾರಿಯನ್ನು ಹಾಗೂ ಲಾರಿ ಚಾಲಕ ನಿಂಗಪ್ಪ ಲಮಾಣಿ ಎಂಬಾತನನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಅದರಂತೆ ಭಾನುವಾರ ನಸುಕಿನ ಜಾವ ಗಳಗನಾಥ ಗ್ರಾಮದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಬರುವ ಟ್ರ್ಯಾಕ್ಟರ್‌ವೊಂದನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದಾನೆ.
ಪ್ರಕರಣ ಕುರಿತಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ 2 ದೂರು ದಾಖಲಾಗಿರುವುದಾಗಿ ಪಿಎಸ್‌ಐ ಮಾಹಿತಿ ನೀಡಿದ್ದಾರೆ.ಅಕ್ರಮ ಮದ್ಯ ಮಾರಾಟ: ಅನಧಿಕೃತವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಸುಮಾರು 17 ಲೀಟರ್‌ಗೂ ಅಧಿಕ ಮದ್ಯವನ್ನು ವಶಕ್ಕೆ ಪಡೆದಿದ್ದು, ಆರೋಪಿಯು ಘಟನಾ ಸ್ಥಳದಿಂದ ಓಡಿ ಹೋಗಿದ್ದು ದೂರು ದಾಖಲಾಗಿದೆ ಎಂದು ಗುತ್ತಲ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಎನ್. ದೊಡ್ಡಮನಿ ಹೇಳಿದ್ದಾರೆ.ಸಮೀಪದ ಕನವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಭಾನುವಾರ ಮಧ್ಯಾಹ್ನ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಗಸ್ತು ತಿರುಗುತ್ತಿದ್ದ ಪಿಎಸ್‌ಐಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದಾಗ ವಿವಿಧ ಕಂಪನಿಯ ಸುಮಾರು 17 ಲೀಟರ್ ಮದ್ಯದ ಬಾಟಲಿ ದೊರೆತಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಉಮೇಶ ತುಳಜಪ್ಪ ಕಾಟೇನವರ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿದು ಬಂದಿದೆ.ಘಟನೆ ಕುರಿತಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.