ಕನ್ನಡಪ್ರಭ ವಾರ್ತೆ ಮದ್ದೂರು
ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಗಾಣಿಕೆ ಶುಲ್ಕ ವಸೂಲಾತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಶೀಘ್ರ ಕಡಿವಾಣ ಹಾಕಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ಎಪಿಎಂಸಿ ಎಳನೀರು ಮಾರುಕಟ್ಟೆಯ ಪ್ರಾಂಗಣದಲ್ಲಿ 55 ಲಕ್ಷ ರು. ವೆಚ್ಚದ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮಾರುಕಟ್ಟೆಯಲ್ಲಿ ಇನ್ನು ಜನಪ್ರತಿನಿಧಿಗಳ ಆಡಳಿತ ಮಂಡಳಿ ಅಧಿಕಾರಕ್ಕೆ ಬರದ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಅಂದಾ ದರ್ಬಾರ್ ನಡೆಸುತ್ತಿದ್ದಾರೆ ಎಂದರು.
ಕೆಲವು ಅಧಿಕಾರಿಗಳು ಎಳನೀರು ಸಾಗಾಣಿಕೆಯ ಶುಲ್ಕ ವಸೂಲಿ ಮಾಡುವಾಗ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಮಾರುಕಟ್ಟೆ ವರ್ತಕರು ದೂರು ನೀಡಿದ್ದಾರೆ. ಇಂತಹ ವ್ಯವಹಾರಗಳಿಗೆ ಕಡಿವಾಣ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರ ವರ್ತಕರು ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಕಾಮಗಾರಿಯಡಿ ಶ್ರಮಿಕ ಭವನದ ಪಕ್ಕದ ರಸ್ತೆ, ಆಡಳಿತ ಕಚೇರಿ ಬಲಭಾಗದ ಸಣ್ಣ ಅಂಗಡಿ ಮಳಿಗೆಗಳ ಮುಂಭಾಗ ಕಾಂಕ್ರೀಟ್ ರಸ್ತೆ, ನೀರು ಸರಬರಾಜು ವ್ಯವಸ್ಥೆ, ಚರಂಡಿ ನಿರ್ಮಾಣ, ಇತರೆ ಮೂಲ ಅವಶ್ಯಕತೆಗಳ ಒದಗಿಸಲಾಗುವುದು ಎಂದರು.
ಈ ಅಭಿವೃದ್ಧಿ ಕಾರ್ಯಗಳು ಮಾರುಕಟ್ಟೆ ಬೆಳವಣಿಗೆಗೆ ಸಹಾಯಕವಾಗಲಿವೆ ಮತ್ತು ಕೃಷಿ ಉತ್ಪನ್ನ ವಹಿವಾಟನ್ನು ಸುಗಮಗೊಳಿಸಲಿವೆ ಎಂದರು.ಈ ವೇಳೆ ಮಾರುಕಟ್ಟೆ ಕಾರ್ಯದರ್ಶಿ ಆರ್.ಲತಾ ಕುಮಾರಿ, ಸಹಾಯಕ ಕಾರ್ಯದರ್ಶಿಗಳಾದ ಶಿವಕುಮಾರ್, ಸಾಕಮ್ಮ, ಎಪಿಎಂಸಿ ಮೈಸೂರು ವಿಭಾಗದ ಎ.ಇ.ಇ. ಗೌರೀಶ್ ಗೌಡ, ಎ.ಇ.ಹಸೀಬ್ ಅಹಮದ್, ಎಂದರು. ಕಾರ್ಯಕ್ರಮದಲ್ಲಿ ರೈತರು, ವ್ಯಾಪಾರಸ್ಥರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಮುಸ್ಲಿಮರು ಶ್ರಮಜೀವಿಗಳು, ಮೀಸಲಾತಿಗೆ ವಿರೋಧ ಅರ್ಥಹೀನ: ಕೆ.ಎಂ.ಉದಯ್ಕನ್ನಡಪ್ರಭ ವಾರ್ತೆ ಮದ್ದೂರು
ಮುಸ್ಲಿಮರು ಶ್ರಮಜೀವಿಗಳು. ಎಂತಹ ಕಠಿಣ ಕೆಲಸಗಳನ್ನಾದರೂ ಮಾಡುತ್ತಾರೆ. ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ಬಗ್ಗೆ ವಿರೋಧ ಮಾಡುವುದು ಅರ್ಥಹೀನ ಎಂದು ಶಾಸಕ ಕೆ.ಎಂ. ಉದಯ್ ಶನಿವಾರ ಹೇಳಿದರು.ಸುದ್ಧಿಗಾರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಹೋಲಿಸಿದರೆ ಮುಸ್ಲಿಂ ಬಾಂಧವರು ಹೆಚ್ಚು ಶ್ರಮಜೀವಿಗಳು. ಬಾಲ್ಯದಿಂದಲೇ ಅವರು ದುಡಿಮೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಅವರ ಕೊಡುಗೆ ಎಲ್ಲಾ ಕಡೆ ಇದೆ. ಹಿಂದೂಗಳು ಹೈಟೆಕ್ ಜೀವನಕ್ಕೆ ಮಾರು ಹೋಗಿ ಶ್ರಮವಹಿಸಿ ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಮಂಡ್ಯದ ಜನರ ಮೇಲೆ ಅಪಾರ ಪ್ರೀತಿ ಮತ್ತು ಮಮತೆ ಇದೆ. ಇಂತಹ ಸಲುಗೆಯಿಂದಲೇ ಮಂಡ್ಯದವರು ಛತ್ರಿಗಳು ಎಂದು ತಮಾಷೆಯಾಗಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ರೈತ ಸಂಘಟನೆಗಳ ತೀವ್ರ ವಿರೋಧ ಕುರಿತು ಪ್ರತಿಕ್ರಿಯಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್, ಪುರಸಭಾಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ತಾಲೂಕು ಸೊಸೈಟಿ ನಿರ್ದೇಶಕ ಶಂಕರ್ ಲಿಂಗೇಗೌಡ, ಗೊರವನಹಳ್ಳಿ ರಾಘು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆ.ಎಸ್.ನಾಗೇಶ್, ಎಂ.ಡಿ.ಮಹಾಲಿಂಗಯ್ಯ ಮತ್ತಿತರರಿದ್ದರು.