ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸರಕಾರಿ ರಕ್ಷಿತಾರಣ್ಯವೆಂದರೆ ಕಾಡು ಪ್ರಾಣಿಗಳಿಗೆ ಸುರಕ್ಷಿತ ತಾಣ. ಆದರೆ ರಕ್ಷಿತಾರಣ್ಯದಿಂದಲೇ ಇದೀಗ ಕಾಡು ಪ್ರಾಣಿಗಳು ಅವ್ಯಾಹತವಾಗಿ ಗುಂಡೇಟಿಗೆ ಬಲಿಯಾಗುತ್ತಿರುವುದು ರಕ್ಷಿತಾರಣ್ಯವೆಂಬ ಪದವನ್ನೇ ಅಣಕಿಸಿದಂತಿದೆ. ಕೆಲ ದಿನಗಳ ಮೊದಲು ಇದೇ ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಹಾಡು ಹಗಲೇ ೪ ಮಂದಿ ಭೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಗುಂಡಿಕ್ಕಿ ಕೊಂದು ಒಣ ಮಾಂಸವನ್ನಾಗಿಸಿದ್ದನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿತ್ತು.ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟಕ್ಕೆ ಆಹಾರ ಬಯಸಿ ಬಂದ ಕಾಡುಕೋಣಕ್ಕೆ ಗುಂಡಿಕ್ಕಿ ಕೊಂದು ಕಾಡಿನಲ್ಲೇ ಅದನ್ನು ತುಂಡು ಮಾಡಲಾಗಿ ಪಿಕ್‌ಅಪ್ ವಾಹನದ ಮೂಲಕ ಸಾಗಾಟ ಮಾಡಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಯ ಮನೆಯಲ್ಲಿ ಅದನ್ನು ಒಣ ಮಾಂಸವಾಗಿ ಪರಿವರ್ತಿಸಿ ಶೇಖರಿಸಿ ಇಡಲಾಗಿರುವುದನ್ನು ವಲಯ ಅರಣ್ಯಾಧಿಕಾರಿ ತಂಡ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿತ್ತು.
ಕೇರಳದಲ್ಲಿ ಭಾರೀ ಬೇಡಿಕೆ: ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವ ನಿಡ್ಲೆ, ಶಿಬಾಜೆ, ಶಿರಾಡಿ ಪರಿಸರದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಭೇಟೆಯಾಡುವ ತಂಡವೊಂದು ಅದನ್ನು ಒಣ ಮಾಂಸವನ್ನಾಗಿ ಮಾಡಿ ಒಣಗಿಸಿ ೩ ರಿಂದ ೫, ೧೦ ಕೆ.ಜಿ.ಯ ಪ್ಯಾಕ್ ಮಾಡಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಈ ರೀತಿಯಾಗಿ ಒಣಗಿಸಿದ ಮಾಂಸ ೧ ಕೆ.ಜಿ.ಗೆ ೧೩೦೦ ರೂಪಾಯಿಯಿಂದ ೧೫೦೦ ರೂಪಾಯಿ ತನಕ ಭಾರೀ ಬೇಡಿಕೆಯಲ್ಲಿ ಮಾರಾಟ ನಡೆಯುತ್ತದೆ ಎಂದು ಹೇಳಲಾಗಿದ್ದು, ಪ್ರಸಕ್ತ ಇಲ್ಲಿನ ಕಾಡುಗಳ್ಳರ ತಂಡಗಳು ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾಗಿದೆ.ಕೆಲ ದಿನಗಳ ಹಿಂದೆ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಸರಕಾರಿ ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದು ಮನೆಯೊಂದರ ಪ್ರೀಝರ್ ನಲ್ಲಿರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬ್ಬಂದಿಗಳಾದ ಸುನಿಲ್, ಶಿವಾನಂದ ರವರ ತಂಡ ಶಂಕಿತ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡಿದ್ದ ಘಟನೆ ನಡೆದಿತ್ತು.
ಕಡವೆ ಜಿಂಕೆಗಳ ಮಾಂಸಕ್ಕೆ ಭಾರೀ ಬೇಡಿಕೆಕಾಡಿನಲ್ಲಿ ಸ್ವಚ್ಚಂದವಾಗಿ ಮೇಯುತ್ತಾ ಇರುವ ಜಿಂಕೆಗಳು, ಕಡವೆಗಳನ್ನು ಸ್ಥಳೀಯರು ತಮ್ಮ ಅವಶ್ಯಕತೆಗನುಗುಣವಾಗಿ ಭೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಬಳಸುತ್ತಿದ್ದ ಕೃತ್ಯಗಳು ಸರ್ವೇ ಸಾಮಾನ್ಯ. ಇದೀಗ ಹಣ ಸಂಪಾದನೆಯ ನೆಲೆಗಟ್ಟಿನಲ್ಲಿ ಕಾಡುಪ್ರಾಣಿಗಳ ಹತ್ಯೆ ನಡೆಯುತ್ತಿದೆ. ಕಡವೆ ಮಾಂಸ ಕಿಲೋ ಒಂದಕ್ಕೆ ಸಾವಿರಕ್ಕೂ ಮಿಕ್ಕಿದ ದರದಲ್ಲಿ ಖರೀದಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಇದರಿಂದಾಗಿ ಸ್ವಂತ ಬಳಕೆಗಿಂತಲೂ ಮಿಗಿಲಾಗಿ ಮಾರಾಟದ ಉದ್ದೇಶದಿಂದ ಕಾಡು ಪ್ರಾಣಿಗಳ ಹತ್ಯೆಯಾಗುತ್ತಿರುವುದರಿಂದ ಅನಿಯಂತ್ರಿತ ಹತ್ಯೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಕ್ಷಿತಾರಣ್ಯ ಸುರಕ್ಷಿತವಾಗಿರಲಿ ಕಸ್ತೂರಿ ರಂಗನ್ ವರದಿಯಲ್ಲಿ ಅಡಕವಾಗಿರುವ ಕಾಡು ಪ್ರಾಣಿಗಳ ಹಿತ ರಕ್ಷಣೆಯ ಅನಿವಾರ್ಯತೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪಶ್ಚಿಮಘಟ್ಟ ಪ್ರದೇಶದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದಾಗಲಿ, ಪರಿಸರ ನಾಶವನ್ನು ಮಾಡಬಾರದು. ಅಂತೆಯೇ ಅನಾದಿ ಕಾಲದಿಂದಲೂ ಕಾಡು ಪ್ರಾಣಿಗಳ ಭೇಟೆ ನಡೆಯುತ್ತಲೇ ಇತ್ತು. ಆಹಾರಕ್ಕಾಗಿ ಬೇಟೆಯಾಡಿ ಮಿಕ್ಕುಳಿದ ಮಾಂಸವನ್ನು ಪರಿಸರದಲ್ಲಿ ಉಚಿತವಾಗಿ ವಿತರಿಸಲಾಗುತ್ತಿತ್ತು. ಆದರೆ ಇದೀಗ ಕಾಲ ಬದಲಾದಂತಿದೆ. ವ್ಯವಹಾರಕ್ಕಾಗಿ ಕಾಡುಪ್ರಾಣಿಗಳ ಹತ್ಯೆ ನಡೆಸಲಾಗುತ್ತಿದೆ. ಕಾಡು ಪ್ರಾಣಿಗಳ ರಕ್ಷಣೆಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಪರಿಸರ ಉಳಿದರೆ ಪರಿಸರದಲ್ಲಿ ಸಮತೋಲನ ಕಾಯ್ದುಕೊಂಡರೆ ನಾಳಿನ ನಮ್ಮ ಬದುಕು ಹಸನು. ಇಲ್ಲವಾದರೆ ನಮಗೂ ಸಮಸ್ಯೆ. ಈ ನಿಟ್ಟಿನಲ್ಲಿ ರಕ್ಷಿತಾರಣ್ಯವಾದರೂ ಕಾಡು ಪ್ರಾಣಿಗಳಿಗೆ ಸುರಕ್ಷಿತವಾಗಿರಲಿ ಎಂದು ಶಿರಾಡಿ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಕೆ. ಆರ್. ಪ್ರತಿಕ್ರಿಯಿಸಿದ್ದಾರೆ. ಕಾಡಿನ ಸಂಪತ್ತು ಸಂರಕ್ಷಣೆಯೇ ನಮ್ಮ ಆದ್ಯತೆ: ವಲಯ ಅರಣ್ಯಾಧಿಕಾರಿ ನಮ್ಮ ವಲಯ ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಾಡು ಪ್ರಾಣಿಗಳ ಹತ್ಯೆಗೆ ಸಂಬಂಧಿಸಿ ಪತ್ತೆ ಕಾರ್ಯವನ್ನು ನಡೆಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿನ ಮರಗಳಾಗಲಿ. ಕಾಡು ಪ್ರಾಣಿಗಳಾಗಲಿ ಅದು ಸಂರಕ್ಷಿಸಬೇಕಾದ ಅರಣ್ಯ ಸಂಪತ್ತು . ಅದರ ಸಂರಕ್ಷಣೆಗೆ ವಿಶೇಷ ಮುತುವರ್ಜಿ ಸಹಿಸಲಾಗುತ್ತಿದೆ. ಪತ್ತೆಯಾದ ಎರಡೂ ಪ್ರಕರಣಗಳಲ್ಲಿ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಲಾಗಿದೆ. ಸಮರ್ಪಕ ತನಿಖೆ ನಡೆಸಿ ನೈಜ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.ಪೊಟೋ ಪೈಲ್ ನೇಮ್ : ಯುಪಿಪಿ_ಅಕ್ಟೋ೨೧_೩, ಒಣ ಮಾಂಸವಾಗಿ ಪರಿವರ್ತಿತ ಕಾಡುಕೋಣದ ಮಾಂಸ ೩ಎ ಕಡವೆ ಮಾಂಸ ಮತ್ತು ಕಡವೆಯನ್ನು ಕೊಲ್ಲುವುದಕ್ಕೆ ಬಳಸಲಾದ ಕೋವಿ ಸಹಿತ ಅರಣ್ಯ ಇಲಾಖಾಧಿಕಾರಿಗಳು ೩ಬಿ ಕಡವೆ ಮಾಂಸ