ಅರಣ್ಯ ನಾಶದಿಂದ ಉಂಟಾಗುವ ಭೂ ಕುಸಿತವನ್ನು ತಡೆಯುವ ಸಲುವಾಗಿ ಅಕ್ರಮ ಹೋಂ ಸ್ಟೇ, ರೆಸಾರ್ಟ್‌, ಲೇಔಟ್ ತೆರವಿಗೆ ರಾಜ್ಯ ತಾಕೀತು

KannadaprabhaNewsNetwork |  
Published : Aug 03, 2024, 01:35 AM ISTUpdated : Aug 03, 2024, 05:12 AM IST
ಈಶ್ವರ್‌ ಖಂಡ್ರೆ | Kannada Prabha

ಸಾರಾಂಶ

ಅರಣ್ಯ ನಾಶದಿಂದ ಉಂಟಾಗುವ ಭೂ ಕುಸಿತವನ್ನು ತಡೆಯುವ ಸಲುವಾಗಿ ರಾಜ್ಯದ ಪಶ್ಚಿಮ ಘಟ್ಟದ ಗಿರಿ ಪ್ರದೇಶ ವ್ಯಾಪ್ತಿಯಲ್ಲಿ 2015ರಿಂದೀಚೆಗೆ ಆಗಿರುವ ಅರಣ್ಯ ಒತ್ತುವರಿಯನ್ನು ಗುರುತಿಸಿ, ಶೀಘ್ರದಲ್ಲಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು  ಸೂಚನೆ ನೀಡಿದ್ದಾರೆ.

 ಬೆಂಗಳೂರು :  ಅರಣ್ಯ ನಾಶದಿಂದ ಉಂಟಾಗುವ ಭೂ ಕುಸಿತವನ್ನು ತಡೆಯುವ ಸಲುವಾಗಿ ರಾಜ್ಯದ ಪಶ್ಚಿಮ ಘಟ್ಟದ ಗಿರಿ ಪ್ರದೇಶ ವ್ಯಾಪ್ತಿಯಲ್ಲಿ 2015ರಿಂದೀಚೆಗೆ ಆಗಿರುವ ಅರಣ್ಯ ಒತ್ತುವರಿಯನ್ನು ಗುರುತಿಸಿ, ಶೀಘ್ರದಲ್ಲಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ 2015ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ಗುರುತಿಸಬೇಕು. ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ಕೃಷಿ ಭೂಮಿ, ಹೋಂ ಸ್ಟೇ, ರೆಸಾರ್ಟ್‌ ಸೇರಿದಂತೆ ಎಲ್ಲ ರೀತಿಯ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಒತ್ತುವರಿ ತೆರವು ಮಾಡಬೇಕು ಹಾಗೂ 1 ತಿಂಗಳೊಳಗಾಗಿ ಅದಕ್ಕೆ ಕೈಗೊಂಡಿರುವ ಕ್ರಮದ ಕುರಿತಂತೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.

ರಾಜ್ಯದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಉಂಟಾದ ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ. ಈ ದುರಂತಗಳು ನಮಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅದಕ್ಕೆ ಈಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಆಗಿರುವ ಒತ್ತುವರಿ ತೆರವು ಮಾಡಿ, ಅದರ ಉಳಿವಿಗೆ ಹಾಗೂ ಮುಂದಿನ ಅನಾಹುತ ತಡೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಅರಣ್ಯಗಳನ್ನು ನಾಶ ಮಾಡಿ ಕಾಫಿತೋಟ, ಮನೆ, ಹೋಂಸ್ಟೇ, ರೆಸಾರ್ಟ್‌ಗಳನ್ನು ಅಕ್ರಮವಾಗಿ ನಿರ್ಮಿಸುವುದು ಹೆಚ್ಚಾಗಿದೆ. ಅಲ್ಲದೆ ಬೃಹತ್‌ ಮರಗಳ ಕಡಿತ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿರುವುದರಿಂದ ಅರಣ್ಯ ಪ್ರದೇಶದ ಮಣ್ಣು ಸಡಿಲಗೊಂಡು ಭೂ-ಕುಸಿತದಂತಹ ಪ್ರಕರಣ ಸಂಭವಿಸುವ ಆತಂಕ ಎದುರಾಗಿದೆ. ಈ ಕುರಿತಂತೆ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಕ್ಕೆ ಈಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳೊಳಗಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿನ ಒತ್ತುವರಿ ಗುರುತಿಸಿ, ಅದನ್ನು ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!