ಕನ್ನಡ ಪ್ರಭವಾರ್ತೆ ಜಗಳೂರು
ಇತ್ತೀಚಿನ ದಿನಗಳಲ್ಲಿ ಒತ್ತಡದ ನಡುವೆ ಆರೋಗ್ಯದ ಕಡೆ ಗಮನಹರಿಸದೇ ಇರುವುದರಿಂದ ಹಲವಾರು ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ಹೇಳಿದರು.ತಾಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ಮಠದ ಆವರಣದಲ್ಲಿ ದಾಸೋಹ ಸಾಂಸ್ಕೃತಿಕ ಉತ್ಸವದ 4ನೇ ದಿನದ ಅಂಗವಾಗಿ ಗುರುವಾರ ಉಚಿತ ಆರೋಗ್ಯ ತಪಾಸಣಾ ಬೃಹತ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯವಾಗಿದೆ. ಆರೋಗ್ಯ ಉತ್ತಮವಾಗಿ ಇದ್ದರೆ ಏನಾದರೂ ಸಾಧಿಸಲು ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ದಾಸೋಹ ಮಠಗಳು ಉಚಿತ ಊಟ, ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಂತಹ ಕೆಲಸ ನ್ನು ಮಾಡುತ್ತಿರೋದು ಶ್ಲಾಘನೀಯ ಎಂದರು.ಬೆಂಗಳೂರಿನ ಖ್ಯಾತ ಕ್ಯಾನ್ಸರ್ ವೈದ್ಯರಾದ ಇಬ್ರಾಹಿಂ ನಾಗನೂರು ಮಾತನಾಡಿ, ಕುಡಿಯುವ ನೀರು ಮತ್ತು ಆಹಾರ ಪದ್ಧತಿಗಳ ವ್ಯತ್ಯಾಸದಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗವು ಕೊನೆಯ ಹಂತ ತಲುಪಿದಾಗ ಏನು ಮಾಡಲೂ ಸಾಧ್ಯವಿಲ್ಲ. ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.
ರಾಜ್ಯ ಬೀಜ ಅಭಿವೃದ್ಧಿ ನಿಗಮ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ, ಕೇಳದೇ ಯಾರೂ ಕೊಡುವುದಿಲ್ಲ. ಉತ್ತಮ ಕೆಲಸ ಕಾರ್ಯಗಳಿಗೆ ಪ್ರತಿಯೊಬ್ಬರು ನೀಡುತ್ತಾರೆ. ಯುವ ಸಮುದಾಯವು ಗುಟ್ಕಾ ತಂಬಾಕುಗಳಂಥ ಮಾದಕ ವಸ್ತುಗಳಿಗೆ ದಾಸರಾಗಿ, ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ವಿಷಾದ ವ್ಯಕ್ತ ಪಡಿಸಿದರು.ದಾಸೋಹ ಸಂಸ್ಕೃತಿ ಉತ್ಸವದ ಮುಖ್ಯ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ, ದಂತವೈದ್ಯರಾದ ಪ್ರಫುಲ್ ತುಮಾಟಿ, ಹಾಲಸ್ವಾಮಿ ಕಂಬಳಿ ಮಠ ಮಾತನಾಡಿದರು.
ಗ್ರಾಮದ ಪ್ರತಿಭಾವಂತ ವೈದ್ಯರಾದ ಎ.ಟಿ. ರಾಕೇಶ್, ಶಿವಕುಮಾರ್, ಎಚ್.ಜಿ. ಪ್ರಭು ಅವರನ್ನು ಸನ್ಮಾನಿಸಲಾಯಿತು. ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್, ಕೆಪಿಸಿಸಿಯ ಎಸ್‌ಟಿ ಘಟಕ ರಾಜ್ಯಧ್ಯಕ್ಷ ಕೆ.ಪಿ. ಪಾಲಯ್ಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.ಕಾನುಮಡುಗು ಮಠದ ಧರ್ಮಾಧಿಕಾರಿ ಐರ್ಮಡಿ ಶರಣಾರ್ಯರು, ಮೈನಳ್ಳಿ ಬಸವರಾಜ್, ಗಡಿಮಕುಂಟೆ ಶಿವಕುಮಾರ್, ವೀರೇಶ್, ರುದ್ರಮುನಿ ಇತರರು ಇದ್ದರು.
- - --೨೮ಜೆಜಿಎಲ್೦೧:
ಜಗಳೂರು ತಾಲೂಕಿನ ದೊಣಿಯಲ್ಲಿ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ ವನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಉದ್ಘಾಟಿಸಿದರು.