ಕುದೂರು: ನಮ್ಮ ಹುಟ್ಟಿಗೆ ಸಾರ್ಥಕ್ಯ ಬರುವುದು ಯಾವಾಗ ಎಂದರೆ ನಮ್ಮ ಬದುಕು ಸುಂದರವಾಗಿದ್ದಾಗ ಮಾತ್ರ. ಅಂತಹ ಬದುಕು ಸಾರ್ಥಕ ರೂಪ ಪಡೆಯಲು ನಿಸ್ವಾರ್ಥ ಸೇವಾ ಮನೋಭಾವ ಮೂಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಚಿತ್ರನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಹಾಸ್ಯ ಕಲಾವಿದ ವೈ.ವಿ.ಗುಂಡೂರಾವ್ ಮಾತನಾಡಿ, ಯಾವುದೇ ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಎಷ್ಟು ಬೇಕಾದರೂ ಕನ್ನಡ ಪದಗಳನ್ನು ಸೃಷ್ಟಿಸಬಹುದು. ಅಂತಹ ಪದಸಂಪತ್ತು ಕನ್ನಡ ಭಾಷೆಗಿದೆ ಎಂದು ಹೇಳಿದರು.
ಬ್ಯಾಂಕರ್ ಎಂದರೆ ಕನ್ನಡದಲ್ಲಿ ಏನಂತಾರೆ?ಡಾಕ್ಟರ್ ಎಂದರೆ ವೈದ್ಯ, ಲಾಯರ್ ಅಂದರೆ ವಕೀಲ ಎನ್ನುವ ಹಾಗೆ ಬ್ಯಾಂಕರ್ ಎಂದರೆ ಕನ್ನಡದಲ್ಲಿ ಏನಂತಾರೆ ಎಂದರೆ ಹಾಸ್ಯವಾಗಿ ಹೇಳಬಹುದೆಂದರೆ ಧನಕಾಯೋನು ಎನ್ನಬಹುದು ಎಂದು ಉತ್ತರಿಸಿದರು.
ಸಾಕ್ಸ್ ಎನ್ನುವುದಕ್ಕೆ ಕನ್ನಡದಲ್ಲಿ ಕಾಲುಚೀಲ ಎನ್ನುತ್ತಾರೆ. ಆದರೆ ಇನ್ನೂ ಸರಳಗೊಳಿಸಿ ಹೇಳಬಹುದೆಂದರೆ, ಮುಖ ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಎನ್ನುತ್ತೇವೆ. ಹಾಗೆ ಕಾಲುಚೀಲಕ್ಕೆ ಕೆರವಸ್ತ್ರ ಎನ್ನಬಹುದು.ಕಂಪ್ಯೂಟರ್ ಅಡಿಟ್ ಅದವನನ್ನು ಗಣಕದಾಸ ಎನ್ನಬಹುದು, ಹೀಗೆ ನಮ್ಮದೇ ಸ್ಥಳೀಯ ಭಾಷೆಯ ಪದಗಳನ್ನು ಬಳಸಿ ಕನ್ನಡ ಪದ ಸಂಪತ್ತನ್ನು ಹೆಚ್ಚು ಮಾಡಬಹುದು ಎಂದು ಗುಂಡೂರಾವ್ ರವರು ತಮ್ಮ ಹಾಸ್ಯಮಿಶ್ರಿತ ಮಾತುಗಳಲ್ಲಿ ಜನರನ್ನು ರಂಜಿಸಿದರು.
ನೂತನ ಅಧ್ಯಕ್ಷ ಎಂ.ಜಿ.ಮಹೇಶ್ ಮಾತನಾಡಿ, ಕುದೂರು ಭೈರನದುರ್ಗದಲ್ಲಿ 5 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಜೊತೆಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕೇಂದ್ರಿತವಾಗಿದ್ದ ಆರೋಗ್ಯಶಿಬಿರಗಳನ್ನು ಚಿಕ್ಕ ಗ್ರಾಮಗಳಲ್ಲೂ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.ನಿರ್ಗಮಿತ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಭೈರನದುರ್ಗಕ್ಕೆ ಈಗಾಗಲೇ ಬೆಟ್ಟದ ತುದಿವರೆಗೂ ಚಾರಣ ಮಾಡಲು ಅನುಕೂಲವಾಗಲೆಂದು ದಾರಿ ನಿರ್ಮಿಸಲಾಗಿದೆ. ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಉಚಿತ ಹಸುಗಳನ್ನು ಕೊಡಿಸಿ ಅವರ ಬದುಕಿಗೊಂದು ಆಸರೆಯನ್ನು ಕುದೂರು ರೋಟರಿ ಕ್ಲಬ್ ಮಾಡಿಕೊಟ್ಟಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆ ರೋಟರಿ ಕಾರ್ಯದರ್ಶಿ ಆರ್.ಕುಮಾರಸ್ವಾಮಿ ಮಾತನಾಡಿದರು. ಮಾಗಡಿ ತಾಲೂಕಿನ ಐಐಟಿ ಗೆ ಆಯ್ಕೆಯಾದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜ ಸೇವೆ ವಿಭಾಗದಲ್ಲಿ ಸೀರೆ ಉದ್ಯಮಿ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.ಮಲ್ಲೂರು ಲೋಕೇಶ್ ಸಂಪಾದಕತ್ವದಲ್ಲಿ ಬಂದಿರುವ ರೋಟರಿ ಕ್ಲಬ್ ನ ಕುದೂರು ಎಕ್ಸ್ ಪ್ರೆಸ್ ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ನೂತನ ಕಾರ್ಯದರ್ಶಿ ಎಚ್.ಪಿ.ಹರೀಶ್ಪಟೇಲ್, ನಿರ್ಗಮಿತ ಕಾರ್ಯದರ್ಶಿ ಡಾ.ಎಚ್.ಜಿ.ರವಿ, ರವಿಕುಮಾರ್, ಶಿವರಾಜ್, ಹೊನ್ನಾಪುರ ಶಿವಪ್ರಸಾದ್, ಕೆ.ಟಿ.ವೆಂಕಟೇಶ್, ಜಗದೀಶ್, ಮುತ್ತಸಾಗರ ಸೋಮಶೇಖರ್ ಧರ್ಮಪಾಲ್, ಮೊಹಮದ್ ಇಮ್ರಾನ್, ನವೋದಯ ಲೋಕೇಶ್, ಕೆ.ಎಂ.ರಮೇಶ್, ಡಾ.ರಘು, ನಾಗಭೂಷಣ್, ಓಂಪ್ರಕಾಶ್ ಹಾಜರಿದ್ದರು.
24ಕೆಆರ್ ಎಂಎನ್ 1.ಜೆಪಿಜಿಕುದೂರಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ ಪದವಿ ಸ್ವೀಕಾರ ಸಮಾರಂಭದಲ್ಲಿ ಐಐಟಿಗೆ ಆಯ್ಕೆಯಾದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಚಿತ್ರನಟ ಮುಖ್ಯಮಂತ್ರಿ ಚಂದ್ರು, ವೈ.ವಿ.ಗುಂಡೂರಾವ್ ಸನ್ಮಾನಿಸಿದರು.