ನವಲಗುಂದ:
ಬಳಿಕ ನೆರವೇರಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀ, ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ ನಿಂತು ಶಾಂತಿ ಸಾಮರಸ್ಯ ಮೂಡಿಸುವ ಕೆಲಸ ಮಠಗಳಿಂದ ನಡೆಯಬೇಕು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮದ ಗುರಿಯಾಗಿದೆ ಎಂದರು.
ಧರ್ಮ ಸಂಸ್ಕೃತಿ ಮತ್ತು ತತ್ವ ಸಿದ್ಧಾಂತ ಪರಂಪರೆಗಳ ತಾಯ್ನಾಡು ಭಾರತ. ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡಲಾರದಿರುವವನು ನಿಜವಾದ ಧರ್ಮಾತ್ಮ. ನದಿ, ಸಮುದ್ರಗಳನ್ನು ಸೇತುವೆ ಮೂಲಕ, ಗುಡ್ಡ-ಬೆಟ್ಟಗಳನ್ನು ಸುರಂಗ ಮಾರ್ಗ ನಿರ್ಮಿಸಿ ದಾಟಬಹುದು. ಆದರೆ, ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆ ದಾಟುವುದು ತುಂಬಾ ಕಷ್ಟ. ಗಾಡಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡುವುದೇ ಧಾರ್ಮಿಕ ಕೇಂದ್ರಗಳ ಮುಖ್ಯ ಗುರಿಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಾನವೀಯ ಸಂಬಂಧ ಸದೃಢಗೊಳಿಸಲು ಆಯಾ ಕಾಲಘಟ್ಟಗಳಲ್ಲಿ ಆಚಾರ್ಯರು, ಋಷಿಮುನಿಗಳು, ಸಂತ, ಮಹಾತ್ಮರು ಅವತರಿಸಿ ಬಾಳಿಗೆ ಬೆಳಕು ತೋರಿಸಿದ್ದಾರೆ ಎಂದು ಹೇಳಿದರು.
ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಯೋಗಿ, ಭೋಗಿ ಮತ್ತು ರೋಗಿ ಯಾವಾಗಲೂ ಎಚ್ಚರವಾಗಿರುತ್ತಾರೆ. ಯೋಗಿ ಸಾಧನೆಗಾಗಿ, ಭೋಗಿ ಇಂದ್ರಿಯ ಸುಖಕ್ಕಾಗಿ, ರೋಗಿ ವೇದನೆಯಿಂದ ಎಚ್ಚರವಾಗಿರುತ್ತಾರೆ ಎಂದು ತಿಳಿಸಿದರು.
ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಪಟ್ಟಾಧಿಕಾರ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎನ್.ಎಚ್. ಕೋನರಡ್ಡಿ ಸೇರಿದಂತೆ ಮತ್ತಿತರರಿದ್ದರು.