ವಾಣಿಜ್ಯ ಬಂದರು ಯೋಜನೆಯಿಂದ ಜೀವವೈವಿಧ್ಯದ ಮೇಲೆ ಪರಿಣಾಮ

KannadaprabhaNewsNetwork |  
Published : Aug 13, 2026, 02:30 AM IST
ಕಾಸರಕೋಡಿನ ಸಮುದ್ರದ ಭಾಗದಲ್ಲಿ ತಡೆಗೋಡೆಯನ್ನು ನಿರ್ಮಿಸಿರುವುದು. | Kannada Prabha

ಸಾರಾಂಶ

ಶರಾವತಿ ನದಿಯ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಕಾಸರಕೋಡಿನ ಟೊಂಕ ಪ್ರದೇಶವು ಜೀವ ವೈವಿಧ್ಯತೆ ಹೊಂದಿದ್ದು, ಈ ಯೋಜನೆಯಿಂದ ಜೀವವೈವಿಧ್ಯದ ಮೇಲೆ ನೇರ ಪರಿಣಾಮ ಬೀರಲಿದೆ.

ಜೀವ ವೈವಿಧ್ಯತೆ ಅವನತಿ ಸಾಧ್ಯತೆ । ದೊಡ್ಡ ಯೋಜನೆಗಳಿಗಿಂತ ಬದುಕು ಮುಖ್ಯ

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಕಾಸರಕೋಡಿನ ಟೊಂಕದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಬಂದರು ಯೋಜನೆಯ ಬಗ್ಗೆ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ನಡೆದಿವೆ. ಸ್ಥಳೀಯ ಮೀನುಗಾರರು ಈ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಈ ಯೋಜನೆಯನ್ನು ಮಾಡಲೇಬೇಕು ಎನ್ನುವ ಹಠದಲ್ಲಿವೆ. ಇದರ ಮಧ್ಯೆ ಶರಾವತಿ ನದಿಯ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಕಾಸರಕೋಡಿನ ಟೊಂಕ ಪ್ರದೇಶವು ಜೀವ ವೈವಿಧ್ಯತೆ ಹೊಂದಿದ್ದು, ಈ ಯೋಜನೆಯಿಂದ ಜೀವವೈವಿಧ್ಯದ ಮೇಲೆ ನೇರ ಪರಿಣಾಮ ಬೀರಲಿದೆ.

ಟೊಂಕ–ಕಾಸರಕೋಡು ಪ್ರದೇಶವು ಶರಾವತಿ ನದಿ ಸಮುದ್ರವನ್ನು ಸೇರುವ ಸೂಕ್ಷ್ಮ ಅಳಿವೆ ವಲಯ. ಇಲ್ಲಿ ಸಿಹಿನೀರು-ಉಪ್ಪುನೀರಿನ ಮಿಶ್ರಣ, ಜಲಚಲನೆ, ಉಪ್ಪಿನಾಂಶ ಮತ್ತು ತಳಭಾಗದ ಗುಣಲಕ್ಷಣಗಳು ಮೀನುಗಳು ಹಾಗೂ ಕಪ್ಪೆಚಿಪ್ಪುಗಳಂತಹ ಜಲಚರ ಜೀವಿಗಳ ವೈವಿಧ್ಯತೆ ಮತ್ತು ವಿತರಣೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.

ಶರಾವತಿ ನದಿಯ ಮೇಲೆ ಅಣೆಕಟ್ಟುಗಳ ನಿರ್ಮಾಣದಿಂದ ಸ್ವಾಭಾವಿಕ ಜಲವೈಜ್ಞಾನಿಕ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಿದೆ. ಅದರ ಪರಿಣಾಮವಾಗಿ ಹಿಂದೆ ೬೦ಕ್ಕೂ ಹೆಚ್ಚು ಮೀನು ಪ್ರಭೇದಗಳಿಗೆ ಸೂಕ್ತವಾಗಿದ್ದ ಪರಿಸರದಲ್ಲಿ ಪ್ರಸ್ತುತ ಸುಮಾರು ೩೫ ಪ್ರಭೇದಗಳಷ್ಟೇ ದಾಖಲಾಗುತ್ತಿರುವುದು, ಜಲವೈಜ್ಞಾನಿಕ ಬದಲಾವಣೆ ಅರ್ಥಮಾಡಿಕೊಳ್ಳಲು ಪ್ರಮುಖ ಸೂಚನೆಯಾಗಿದೆ.

ಅದೇ ರೀತಿ, ಕಪ್ಪೆಚಿಪ್ಪುಗಳಂತಹ ತಳವಾಸಿ ಜೀವಿಗಳು ನೀರಿನ ಉಪ್ಪಿನಾಂಶ, ಸಿಹಿನೀರಿನ ಒಳಹರಿವು ಮತ್ತು ಜಲಚಲನೆಯಲ್ಲಿನ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತವೆ. ಆದ್ದರಿಂದ ಟೊಂಕ-ಕಾಸರಕೋಡು ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳುವಾಗ, ನದಿಯ ಹರಿವು, ಅಳಿವೆಯ ಜಲವೈಜ್ಞಾನಿಕ ಪ್ರಕ್ರಿಯೆಗಳು, ಮೀನು ವೈವಿಧ್ಯತೆ ಮತ್ತು ಕಪ್ಪೆಚಿಪ್ಪುಗಳ ವಾಸಸ್ಥಾನಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡುವುದು ಅಗತ್ಯ.

ಇಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಭಾರಿ ವಾಹನ ಸಂಚಾರ, ಶಬ್ದ ಹಾಗೂ ಇನ್ನಿತರ ಚಟುವಟಿಕೆಗಳಿಂದ ಸಮುದ್ರದ ಜೀವಿಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಯಾವುದೇ ಯೋಜನೆಯನ್ನು ಕೈಗೊಳ್ಳುವಾಗ ಪರಿಸರದ ಮೇಲೆ ಆಗುವ ಪರಿಣಾಮವನ್ನು ವೈಜ್ಞಾನಿಕ ಮತ್ತು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ.

ಮುಖ್ಯವಾಗಿ ನದಿ ಮತ್ತು ಅಳಿವೆ ಪ್ರದೇಶಕ್ಕೆ ಕಲ್ಲು ಇನ್ನಿತರ ವಸ್ತುಗಳನ್ನು ತುಂಬುವುದನ್ನು ನಿಲ್ಲಿಸಬೇಕು. ಅಳಿವೆ ಪರಿಸರ ವ್ಯವಸ್ಥೆಯನ್ನು ರಕ್ಷಿಸಬೇಕು. ಭಾರಿ ವಾಹನಗಳ ಓಡಾಟ ನಿಯಂತ್ರಿಸಬೇಕು. ಪರಿಸರ ಮತ್ತು ಸಿಆರ್ ಝಡ್ ನಿಯಮಗಳನ್ನು ಪಾಲಿಸಬೇಕು. ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನು ಗೌರವಿಸಬೇಕು. ನಮಗೆ ದೊಡ್ಡ ಯೋಜನೆಗಳಿಗಿಂತ ಬದುಕು ಮುಖ್ಯ. ಶರಾವತಿ ನದಿ ಮುಖ್ಯ, ಮೀನುಗಾರಿಕೆ ಅತ್ಯವಶ್ಯ. ಭವಿಷ್ಯದ ಸಲುವಾಗಿ ಈ ಯೋಜನೆ ಬೇಡ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.ಅಭಿವೃದ್ಧಿ ವಿರೋಧಿಸುವುದು ನಮ್ಮ ಉದ್ದೇಶವಲ್ಲ. ನದಿಯ ಪರಿಸರ ವ್ಯವಸ್ಥೆಯ ಕಾರ್ಯವಿಧಾನವನ್ನು ಅರ್ಥೈಸಿಕೊಂಡು, ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಜವಾಬ್ದಾರಿಯುತ ಮತ್ತು ಸುಸ್ಥಿರ ಅಭಿವೃದ್ಧಿ ನಡೆಸುವುದು ಮುಖ್ಯ ಎನ್ನುತ್ತಾರೆ ಪರಿಸರ ವಿಜ್ಞಾನಿ ಡಾ. ಎನ್.ಎಂ. ಗುರುಪ್ರಸಾದ್.ಈ ಹಿಂದಿನಿಂದಲೂ ಸಮುದ್ರದ ಭಾಗದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತಾ ಬಂದಿವೆ. ಈ ಯೋಜನೆ ಬರುವುದರಿಂದ ಕಡಲಾಮೆಗಳಿಗೆ ಮೊಟ್ಟೆ ಇಡಲು ತೊಂದರೆ ಆಗುತ್ತದೆ. ಶಬ್ದ ಮಾಲಿನ್ಯ ಹಾಗೂ ವಾತಾವರಣ ಅಶುದ್ಧವಾಗುತ್ತದೆ. ಹೀಗಾಗಿ ಅವುಗಳ ಸಂತತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ ಯೋಜನೆಯಿಂದ ಮೀನುಗಾರರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಟೊಂಕದ ಜೈನ ಜಟಗೇಶ್ವರ ಯುವಕ ಸಮಿತಿ ಅಧ್ಯಕ್ಷ ಭಾಸ್ಕರ್ ತಾಂಡೆಲ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಜನರಲ್ಲಿ ಎಚ್‌ಐವಿ ಜಾಗೃತಿ ಅಗತ್ಯ: ಡಾ. ಚಿದಾನಂದ ಸಂಜು
ಪೊನ್ನಣ್ಣರಿಗೆ ಸಂಪುಟ ದರ್ಜೆ ಸ್ಥಾನ: ಕೊಡಗಿನಲ್ಲಿ ಸಂಭ್ರಮ