ಶಿಕ್ಷಣದ ಜತೆ ಸಂಸ್ಕಾರ, ಮೌಲ್ಯ ಕಲಿಸಿ: ಬಸವರಾಜ ಹೊರಟ್ಟಿ

KannadaprabhaNewsNetwork |  
Published : Aug 30, 2026, 02:00 AM IST
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಆದರೆ ಶಿಕ್ಷಣದ ಜತೆಗೆ ಉತ್ತಮ ನಡತೆ ಮತ್ತು ಸಂಸ್ಕಾರ ಬೆಳೆಸಿದಾಗ ಮಾತ್ರ ಮಕ್ಕಳು ಸಮಾಜಕ್ಕೆ ಉಪಯುಕ್ತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ.

ಶಿರಹಟ್ಟಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು, ಶಿಸ್ತು, ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವನ್ನೂ ಮೂಡಿಸಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕರೆ ನೀಡಿದರು.ರಾಜ್ಯ ಮಾಧ್ಯಮಿಕ ಶಾಲಾ ರ್ನಕರರ ಸಂಘ ಜಿಲ್ಲಾ ಘಟಕ, ತಾಲೂಕು ಘಟಕದ ವತಿಯಿಂದ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಜಗದ್ಗುರು ಫಕ್ಕೀರೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಚ್.ಟಿ. ಬಿಜ್ಜೂರ ಅವರನ್ನು ಸನ್ಮಾನಿಸಿ ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಆದರೆ ಶಿಕ್ಷಣದ ಜತೆಗೆ ಉತ್ತಮ ನಡತೆ ಮತ್ತು ಸಂಸ್ಕಾರ ಬೆಳೆಸಿದಾಗ ಮಾತ್ರ ಮಕ್ಕಳು ಸಮಾಜಕ್ಕೆ ಉಪಯುಕ್ತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಹಿರಿಯರನ್ನು ಗೌರವಿಸುವುದು, ಸತ್ಯ ಮಾತನಾಡುವುದು, ಸಹಾನುಭೂತಿ, ಪರಸ್ಪರ ಗೌರವ, ಸ್ವಚ್ಛತೆ, ಸಮಯಪಾಲನೆ ಹಾಗೂ ದೇಶಪ್ರೇಮದಂತಹ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕು ಎಂದರು.ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯಾಗಿದೆ. ಶಿಕ್ಷಕರು ತಮ್ಮ ಸೇವೆಯ ಆರಂಭದಿಂದ ನಿವೃತ್ತಿಯ ಅವಧಿಯವರೆಗೂ ಪ್ರಾಮಾಣಿಕತೆ, ಬದ್ಧತೆ ಹಾಗೂ ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಾಶ್ವತವಾದ ಬದಲಾವಣೆ ಮೂಡಿಸುವಂತಹ ಹೆಜ್ಜೆ ಗುರುತು ಬಿಟ್ಟು ಹೋಗಬೇಕು. ಶಿಕ್ಷಕರು ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಕಲಿಸಬೇಕು.

ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ವೃತ್ತಿಯಿಂದ ನಿವೃತ್ತಿಯಾದ ಮಾತ್ರಕ್ಕೆ ಜೀವನದ ಉತ್ಸಾಹ, ಚಟುವಟಿಕೆ ಮತ್ತು ಸಮಾಜಮುಖಿ ಮನೋಭಾವದಿಂದ ನಿವೃತ್ತಿಯಾಗಬಾರದು. ನಿವೃತ್ತಿ ಎನ್ನುವುದು ಬದುಕಿನ ಅಂತ್ಯವಲ್ಲ. ಅದು ಜೀವನದ ಮತ್ತೊಂದು ಹೊಸ ಅಧ್ಯಾಯದ ಆರಂಭ. ಸೇವಾವಧಿಯಲ್ಲಿ ಗಳಿಸಿದ ಅನುಭವ, ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವ ಅವಕಾಶ ನಿವೃತ್ತಿಯ ನಂತರವೂ ಇದೆ. ತಮ್ಮ ಅನುಭವವನ್ನು ಯುವ ಪೀಳಿಗೆಗೆ ಹಂಚಿಕೊಳ್ಳುವ ಮೂಲಕ ನಿವೃತ್ತರು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದರು.

ಬಸವರಾಜ ಹೊರಟ್ಟಿ ಹಾಗೂ ಗೋವಿಂದೇಗೌಡರು ಶಿಕ್ಷಕರ ಪಾಲಿಗೆ ಅನ್ನದಾತರು. ಅವರು ಅಧಿಕಾರದಲ್ಲಿದ್ದಾಗ ಮಾಡಿದ ಸೇವೆ ಮರೆಯಲು ಸಾಧ್ಯವಿಲ್ಲ ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಟಿ. ಬಿಜ್ಜೂರ, ಜಿ.ಆರ್. ಭಟ್ ಮಾತನಾಡಿದರು. ಎಂ.ಕೆ. ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಹಿರೇಮಠ, ಶಿವಪ್ರಕಾಶ ಮಹಾಜನಶೆಟ್ಟರ, ಶಿವರಾಜ ಸೀಮಿಕೇರಿ, ಎಚ್.ಜಿ. ಭೀಮಾರಡ್ಡಿ, ದೀಪಾ ಮೋಹನ್ ಮರಡ್ಡಿ, ಚಂದ್ರಣ್ಣ ಮುಂಡವಾಡ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ್ ಗುತ್ತೆಮ್ಮನವರ, ಶರಣಬಸನಗೌಡ ಪಾಟೀಲ, ಜಯಶ್ರೀ ಬಸವರಡ್ಡಿ, ಶೋಭಾ ಬಿಜ್ಜೂರ, ನವೀನಕುಮಾರ ಅಳವಂಡಿ, ಕೆ.ಎ. ಬಳಿಗೇರ, ಬಿ.ಎಸ್. ಪವಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು