
ನವಲಗುಂದ: ರೈತ ಹುತಾತ್ಮ ದಿನವನ್ನು ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳು ಆಚರಿಸಿದವು. ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ರೈತ ಮುಖಂಡರು, ಮಹದಾಯಿ ಯೋಜನೆ ಜಾರಿಗೊಳಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರೈತ ಹೋರಾಟಗಾರ ಮೈಲಾರಪ್ಪ ವೈದ್ಯ ರಕ್ತದಲ್ಲಿ ಪತ್ರ ಬರೆದು ಮಹದಾಯಿ ಯೋಜನೆ ಜಾರಿಗೊಳಿಸದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ರೈತ ಮುಖಂಡ ಲೋಕನಾಥ ಹೆಬಸೂರ, ತಾಲೂಕಿನಲ್ಲಿ ಸಾಕಷ್ಟು ಮಳೆಯಿಂದ ಬೆಳೆ ಹಾನಿಯಾಗಿದೆ. ಆದರೆ, ಶಿರಗುಪ್ಪಿ ಹೋಬಳಿಗೆ ಸೀಮಿತವಾಗಿ ಬೆಳೆವಿಮೆ ಬಿಡುಗಡೆ ಮಾಡಿಸಲಾಗಿದೆ. ಈ ಮೂಲಕ ತಾಲೂಕಿನ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಕಳಸಾ- ಬಂಡೂರಿ ಯೋಜನೆಯನ್ನು ಬರುವ ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸದಿದ್ದಲ್ಲಿ ಕೇಂದ್ರ ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಮಾತನಾಡಿ, ಬೆಳೆಹಾನಿ, ವಿಮೆ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಹಾಗೆಯೇ ಕಳಸಾ ಬಂಡೂರಿ ನಾಲಾ ಜೋಡಣೆ ವಿಚಾರದಲ್ಲಿ ಸದಾಕಾಲ ಈ ಭಾಗದ ರೈತರ ಹೋರಾಟಕ್ಕೆ ಬೆಂಬಲಕ್ಕೆ ಸಿದ್ಧನಿರುವೆ ಎಂದರು.
ರೈತ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ್, ಮುಖಂಡರಾದ ನಾಗಪ್ಪ ಉಂಡಿ, ಸಿದ್ದನಗೌಡ ಪಾಟೀಲ, ಎನ್. ಡಿ. ವಸಂತಕುಮಾರ, ಪ್ರಕಾಶ ಗೊಂದಳೇ, ದ್ಯಾಮನಗೌಡ ಪಾಟೀಲ, ರವಿರಾಜ ಕಂಬಳಿ, ಶ್ರೀಶೈಲ ಮೂಲಿಮನಿ, ಶಿರಾಜ ಧಾರವಾಡ, ವಿಕ್ರಮ ಕುರಿ, ನಿಂಗಪ್ಪ ಕೆಳಗೇರಿ ಸೇರಿ ರೈತಹೋರಾಟಗಾರರು ಇದ್ದರು.
ನವಲಗುಂದ: