15 ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಠಾನಗೊಳಿಸಿ: ಜಿ.ಎಂ.ಗಂಗಾಧರ ಸ್ವಾಮಿ

KannadaprabhaNewsNetwork |  
Published : Jul 23, 2025, 12:30 AM IST
ಕ್ಯಾಪ್ಷನ22ಕೆಡಿವಿಜಿ31, 32,ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಅಲ್ಪಸಂಖ್ಯಾತರ ಏಳಿಗೆಗಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಲ್ಪಸಂಖ್ಯಾತರ ಏಳಿಗೆಗಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮುಸ್ಲಿಂ, ಕ್ಚಿಶ್ಚಿಯನ್, ಸಿಖ್, ಬೌದ್ಧ ಹಾಗೂ ಜೈನ್ ಸಮುದಾಯ ಸೇರಿ ಒಟ್ಟು 556226 ಜನಸಂಖ್ಯೆ ಇದೆ. ಈ ಸಮುದಾಯಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 207 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 65 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಇನ್ನುಳಿದ 126 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 1 ಕಟ್ಟಡ ಮಾತ್ರ ನಿರ್ಮಾಣದ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಯಾವುದೇ ಇಲಾಖೆಯಲ್ಲಿ ಸರ್ಕಾರಿ ನಿವೇಶನವಿದ್ದಲ್ಲಿ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ಮಂಜೂರು ಮಾಡಬೇಕು ಎಂದು ತಾಕೀತು ಮಾಡಿದರು.

ಅಲ್ಪಸಂಖ್ಯಾತರ ಸಮುದಾಯಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಬಸವ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲು 2 ಎಕರೆ ನಿವೇಶನ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಸೂರಿಲ್ಲದಿರುವ ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಇಲಾಖಾವಾರು ಯೋಜನೆಗಳಾದ ಅರಿವು ಸಾಲ, ಶ್ರಮಶಕ್ತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಹಾಗೂ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಒದಗಿಸಿ ಸಮರ್ಪಕವಾಗಿ ಉಪಯುಕ್ತ ಆಗುವುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ:

ಅಲ್ಪಸಂಖ್ಯಾತರಿಗೆ ರುದ್ರಭೂಮಿ ಅವಶ್ಯವಾಗಿದ್ದು, ಅಗತ್ಯವಾಗಿ ಮಂಜೂರು ಮಾಡುವಂತೆ ನಾಮನಿರ್ದೇಶಿತ ಸದಸ್ಯ ಶಬ್ಬೀರ್ ಸಾಬ್ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಾರ್ಕಂಡೇಯ, ಜಿಲ್ಲಾ ವಕ್ಫ್ ಅಧಿಕಾರಿ ನಾಮನಿರ್ದೇಶಿತ ಸದಸ್ಯರಾದ ಶಬ್ಬೀರ್ ಸಾಬ್, ಸಾದಕ್‌ ವುಲ್ಲಾ, ಅಶೋಕ್ ಕುಮಾರ್ ವನ್ನೆಚಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಶಿಕ್ಷಣ-ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ-ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್‌ ಬೋರ್ಡ್ ಅಥವಾ ಯಾವುದೇ ಇಲಾಖೆ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದ ಅವರು, ಇದರಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಡಿಸಿ ಹೇಳಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ