ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಬಿ.ಬಸವರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಅರಿವು ಹಾಗೂ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕನಸಿನ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಿವೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಕಳೆದ 2 ಕಂತುಗಳು ತಾಂತ್ರಿಕ ಕಾರಣದಿಂದ ಬಿಡುಗಡೆಯಾಗಿಲ್ಲ. ಶೀಘ್ರ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲು ಕ್ರಮವಹಿಸಲಾಗುವುದು ಎಂದು ಸಿಡಿಪಿಒ ಅರುಣ್ ತಿಳಿಸಿದರು.ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 79,138 ಮಹಿಳೆಯರಿದ್ದು, 367 ದೂರಗಳಿವೆ. ಹಣ ಪಾವತಿಗೆ ತಾಂತ್ರಿಕ ಕಾರಣಗಳಿದ್ದು, ಸಮಸ್ಯೆಗಳ ನಿವಾರಣೆ ಮಾಡಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದರು.
ಅನ್ಯಭಾಗ್ಯ ಯೋಜನೆಯಡಿ ಕರಡಕೆರೆ ಗ್ರಾಮದಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಿದ್ದ ರಾಗಿ ಮತ್ತು ಅಕ್ಕಿಗಳಲ್ಲಿ ಮಣ್ಣು, ಕಲ್ಲು ಮಿಶ್ರಿತ ಪಡಿತರವನ್ನು ಹಿಂಪಡೆದು ನ್ಯಾಯಬೆಲೆ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿರುವುದಾಗಿ ಆಹಾರ ಶಿರಸ್ತೇದಾರ್ ಜ್ಯೋತಿ ಸಭೆಗೆ ಮಾಹಿತಿ ನೀಡಿದರು.ಮದ್ದೂರು ತಾಲೂಕಿನಲ್ಲಿ ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ, ಯುವ ನಿಧಿ ಯೋಜನೆಯ ಫಲಾನುಭವಿಗಳ ಸದ್ಬಳಕೆ ಕುರಿತು ಸೆಸ್ಕ್ ಎಇಇ ರಮೇಶ್, ಸಾರಿಗೆ ಅಧಿಕಾರಿ ಚನ್ನಕೇಶವ ಮೂರ್ತಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಲತಾಶ್ರೀ ತಿಳಿಸಿದರು.
ಈ ವೇಳೆ ಗೃಹಲಕ್ಷ್ಮೀ ಯೋಜನೆಯ ಹಣ ಸದ್ಬಳಕೆ ಮಾಡಿಕೊಂಡು ಬಂಡವಾಳ ಹೂಡಿ ಕಿರಾಣಿ ಅಂಗಡಿ ತೆರೆದು ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ನೀಡುತ್ತಿರುವ ಮೆಳ್ಳಹಳ್ಳಿ ಶಿಲ್ಪಾ ವೆಂಕಟೇಶ್ ಮತ್ತು ವೈರ್ ಬ್ಯಾಗ್ಕ ರಕುಶಲ ಕೈ ಕಸುಬನ್ನು ಪ್ರಾರಂಭಿಸಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಮಾಡಿ ಆರ್ಥಿಕವಾಗಿ ಸಧೃಡರಾಗಿ ಜೀವನ ನಡೆಸುತ್ತಿರುವ ಅಣ್ಣೂರು ಗ್ರಾಮದ ಭಾಗ್ಯಮ್ಮ ರಾಜಾಚಾರಿ ಅವರನ್ನು ಅಭಿನಂದಿಸಲಾಯಿತು.ಈ ವೇಳೆ ಯೋಜನೆ ಸಮಿತಿ ಉಪಾಧ್ಯಕ್ಷ ರಾಜೇಂದ್ರ, ಸದಸ್ಯರಾದ ಫೈರೋಜ್ ಖಾನ್, ರಾಜಣ್ಣ ,ಭಾನುಪ್ರಕಾಶ್, ಬೋರೇಗೌಡ, ರಾಜು, ರಘುಪತಿ, ಸಿದ್ದಲಿಂಗ ಪ್ರಸಾದ್, ನಾಗಮ್ಮ, ಗೀತಾ, ತಾಪಂ ಯೋಜನಾಧಿಕಾರಿ ಸುರೇಶ್, ಚಿದಾನಂದ, ಪ್ರೊ ಬೋರೇಗೌಡ, ಎಸ್ಸಿ ಬ್ಲಾಕ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.