- ಆನಗೋಡು ನಾಡ ಕಚೇರಿ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ । ಸರ್ಕಾರಕ್ಕೆ ಮನವಿ ಅರ್ಪಣೆ
- - -- ಮೆಕ್ಕೆಜೋಳ ಪ್ರತಿ ಕ್ವಿಂ.ಗೆ ₹2,400 ಕ್ಕಿಂತಲೂ ಹೆಚ್ಚಿನ ದರಕ್ಕೆ ಖರೀದಿಸಬೇಕು - ಖರೀದಿದಾರರು, ರೈತರ ಸಭೆಯಲ್ಲಿ ಡಿಸಿ ನೀಡಿರುವ ಹೇಳಿಕೆಗೆ ಸಹಮತವಿಲ್ಲ
- ರಾಜ್ಯವೂ ಖರೀದಿ ಕೇಂದ್ರ ಸ್ಥಾಪಿಸಿ, ಆವರ್ತ ನಿಧಿಯಡಿ ಮೆಕ್ಕೆಜೋಳ ಖರೀದಿಸಬೇಕು- - -
ಕನ್ನಡಪ್ರಭ ವಾರ್ತೆ ದಾವಣಗೆರೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ಕಾನೂನು ಜಾರಿಗೊಳಿಸುವ ಮೂಲಕ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವ ಖರೀದಿದಾರರಿಗೆ ಕನಿಷ್ಠ 1ರಿಂದ 5 ವರ್ಷ ಜೈಲುಶಿಕ್ಷೆ ವಿಧಿಸುವ, ಲೈಸೆನ್ಸ್ ರದ್ದು ಸೇರಿದಂತೆ ಇತರೆ ಕಠಿಣ ಕಾನೂನುಗಳ ಜಾರಿಗೆ ಒತ್ತಾಯಿಸಿ ತಾಲೂಕಿನ ಆನಗೋಡು ಗ್ರಾಮದ ನಾಡ ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ- ರಾಜ್ಯ ಸರ್ಕಾರಗಳು ರೈತರ ಹಿತಕಾಯುವ ಕೆಲಸ ಮಾಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವ ಖರೀದಿದಾರರ ಪರವಾನಿಗೆ ರದ್ದುಪಡಿಸಬೇಕು. ₹50 ಕಡಿಮೆ ದರಕ್ಕೆ ಖರೀದಿಸಿದರೆ ಶೇ.5ರಷ್ಟು ದಂಡ, ದಂಡದ ಹಣ ನೇರವಾಗಿ ರೈತರ ಖಾತೆಗೆ ಜಮಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹2400 ಬೆಲೆ ಹೇಳಿದರೆ, ಖರೀದಿದಾರರು ₹1300 ದಿಂದ ₹1700 ಖರೀದಿಸುತ್ತಾರೆ. ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ, ರೈತರಿಗೆ ಬೆಲೆ ಖಾತ್ರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು. ಸಾಕಷ್ಟು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಹೋಬಳಿ, ತಾಲೂಕು, ಜಿಲ್ಲಾಮಟ್ಟದಲ್ಲಿ ಹೋರಾಟ ಶುರುಮಾಡಿದ್ದೇವೆ ಎಂದರು.ಜಿಲ್ಲಾ ಕೇಂದ್ರದಲ್ಲಿ 2014ರಿಂದ ಈವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಬೆಂಬಲ ಘೋಷಿಸಿದ ಮಾತ್ರಕ್ಕೆ ರೈತರಿಗೆ ಪ್ರಯೋಜನ ಆಗುವುದಿಲ್ಲ. ರಾಜ್ಯವೂ ಖರೀದಿ ಕೇಂದ್ರ ಸ್ಥಾಪಿಸಿ, ಆವರ್ತ ನಿಧಿಯಡಿ ಮೆಕ್ಕೆಜೋಳ ಖರೀದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ನಾಡ ಕಚೇರಿ ಉಪ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಸಂಘದ ಹೂವಿನಮಡು ಸಿ.ನಾಗರಾಜ, ಕಾರಿಗನೂರು ಕ್ರಾಸ್ ಶಿವಕುಮಾರ, ಗುಮ್ಮನೂರು ರುದ್ರೇಶ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಕುರ್ಕಿ ಹನುಮಂತಪ್ಪ, ಹೊಸಹಳ್ಳಿ ಮೋಹನ ನಾಯ್ಕ, ಹೊಸಹಳ್ಳಿ ಎನ್. ಭೀಮಾನಾಯ್ಕ, ಭೀಮೇಶ ಗುಮ್ಮನೂರು, ಆಲೂರು ಪರಶುರಾಮ, ಹೊನ್ನೂರು ಮಂಜಣ್ಣ, ಹೊನ್ನೂರು ಸಿದ್ದವೀರಪ್ಪ, ಹೊಸಹಳ್ಳಿ ಮೋಹನ ನಾಯ್ಕ ಇತರರು ಇದ್ದರು.- - -
(ಟಾಪ್ ಕೋಟ್)ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಂಡರೆ ದೇಶದಲ್ಲಿ ಖರೀದಿ ಕೇಂದ್ರಗಳ ಅವಶ್ಯಕತೆಯೇ ಇರುವುದಿಲ್ಲ. ಜಿಲ್ಲಾಧಿಕಾರಿ ಖರೀದಿದಾರು, ರೈತರ ಸಭೆ ಮಾಡಿ, ಮೆಕ್ಕೆಜೋಳವನ್ನು ₹2 ಸಾವಿರಕ್ಕಿಂತ ಕಡಿಮೆ ದರಕ್ಕೆ ಖರೀದಿಸಬಾರದೆಂಬ ಹೇಳಿಕೆ ರೈತ ಸಂಘ ಒಪ್ಪುವುದಿಲ್ಲ. ಕನಿಷ್ಠ ₹2400 ಕ್ಕಿಂತ ಹೆಚ್ಚಿನ ಬೆಲೆಗೆ ಮೆಕ್ಕೆಜೋಳ ಬೆಳೆ ಖರೀದಿಸಲು ಕ್ರಮ ಕೈಗೊಳ್ಳಲಿ.
- ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ, ರೈತ ಸಂಘ-ಹಸಿರು ಸೇನೆ.- - -
-31ಕೆಡಿವಿಜಿ9, 10.ಜೆಪಿಜಿ:ರೈತ ಸಂಘಟನೆಗಳಿಂದ ಉಪ ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು.