ಕನ್ನಡಪ್ರಭ ವಾರ್ತೆ ಮಂಡ್ಯ
ಪಡಿತರ ವಿತರಣೆ ಮಾಡುವವರಿಗೆ ಏಕರೂಪ ಕಮಿಷನ್ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದವರು ದೇಶಾದ್ಯಂತ ಜ.೧೬ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದರು.ಕಮಿಷನ್ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವಾಗಿದೆ. ದೇಶಾದ್ಯಂತ ಪ್ರತಿ ಕ್ವಿಂಟಲ್‌ಗೆ ₹೩೦೦ ನಿಗದಿಪಡಿಸಲು ಆದೇಶಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.
ಕೇಂದ್ರ ಸರ್ಕಾರವು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜಿಎಸ್‌ಟಿ ತೆರಿಗೆ ಮತ್ತು ರಸೀದಿ ತೆರೆಯವ ಪಾಸ್ ಮಿಷನ್ ಪ್ರಿಂಟರ್‌ನ್ನು ಖರೀದಸಬೇಕೆಂದು ರಾಜ್ಯ ಸರ್ಕಾರಗಳಿಗೆ ಒತ್ತಡ ತರುತ್ತಿದ್ದಾರೆ. ಇದು ಮಾಲೀಕರಿಗೆ ಹೊರೆಯಾಗುವುದರಿಂದ ನ್ಯಾಯಬೆಲೆ ಅಂಗಡಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.ಸಾರ್ವಜನಿಕರಿಗೆ ಅಕ್ಕಿಯನ್ನು ನೀಡುವುದರ ಜೊತೆಗೆ ವಿವಿಧ ಅಗತ್ಯ ವಸ್ತುಗಳಾದ ಬೆಲ್ಲ, ಸಕ್ಕರೆ, ಎಣ್ಣೆ, ಬೇಳೆ, ಗೋಧಿ, ದ್ವಿದಳ ಧಾನ್ಯಗಳನ್ನು ಪೂರೈಸುವಂತೆ ಕೋರಿದ ಅವರು, ಪ್ರಸ್ತುತ ವಿತರಣೆ ಮಾಡುತ್ತಿರುವ ರಾಗಿ ಮನುಷ್ಯರು ತಿನ್ನಲು ಯೋಗ್ಯವಿಲ್ಲ. ತೀರಾ ಕಳಪೆಯಿಂದ ಕೂಡಿದೆ. ಪ್ರತಿ ಕ್ವಿಂಟಲ್‌ಗೆ ₹೩೮೨೦ ಕೊಟ್ಟು ನೇರವಾಗಿ ರೈತರಿಂದಲೇ ಖರೀದಿಸಿ ಪಡಿತರದಾರರಿಗೆ ಗುಣಮಟ್ಟದ ರಾಗಿ ನೀಡುವಂತೆ ಒತ್ತಾಯಿಸಿದರು.
ಸಗಟು ಮಳಿಗೆಗಳಿಗೆ ಬಯೋಮೆಟ್ರಿಕ್, ಎಲೆಕ್ಟ್ರಾನಿಕ್ ಸ್ಕೇಲ್, ಸಿಸಿ ಕ್ಯಾಮೆರಾ, ಸಾಗಣೆ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸುವುದು ಅಗತ್ಯವಾಗಿದೆ. ಇದರಿಂದ ಪಡಿತರ ಅಕ್ಕಿ ಕಾಳಸಂತೆಗೆ ಸಾಗಣೆಯಾಗುವುದನ್ನು ತಡೆಯಬಹುದು. ಲಾರಿಗಳ ಮೇಲೆ ಹದ್ದಿನ ಕಣ್ಣಿಡಬಹುದು. ಪಡಿತರ ಪದಾರ್ಥಗಳನ್ನು ಕದ್ದು ಮಾರಾಟ ಮಾಡಲು, ಭ್ರಷ್ಟಾಚಾರವೆಸಗಲು ಸಾಧ್ಯವಾಗುವುದಿಲ್ಲ ಎಂದರು.ಸಗಟು ಮಳಿಗೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ₹೧೩ ಕೋಟಿ, ಗೋಣಿಚೀಲ ಖರೀದಿಗೆ ₹೮೮ ಕೋಟಿ ಗಳನ್ನು ನ.೧೫ರಂದೇ ಬಿಡುಗಡೆ ಮಾಡಿದ್ದರೂ ಇದುವರೆಗೂ ಕಾರ್ಯೋನ್ಮುಖವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ನ್ಯಾಯಬೆಲೆ ಅಂಗಡಿ ಮಾಲೀಕರು, ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳು, ಸಂಘ-ಸಂಸ್ಥೆಗಳ ಕಾರ್ಯದರ್ಶಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.