ಸಾರಾಂಶ
ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ನ ಪ್ರಮುಖ ಆರೋಪಿ ಚಿನ್ನಯ್ಯ, ತನ್ನ ಪತ್ನಿ ಜೊತೆ ಎರಡು ವರ್ಷದ ಹಿಂದೆ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿದ್ದ.
ಬೆಳ್ತಂಗಡಿ/ ಮಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ನ ಪ್ರಮುಖ ಆರೋಪಿ ಚಿನ್ನಯ್ಯ, ತನ್ನ ಪತ್ನಿ ಜೊತೆ ಎರಡು ವರ್ಷದ ಹಿಂದೆ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿದ್ದ.
ಭೇಟಿ ವೇಳೆ, ಆತ ತಾನು ಶವಗಳನ್ನು ಹೂತ ಬಗ್ಗೆ ತಿಮರೋಡಿಗೆ ಮಾಹಿತಿ ನೀಡಿದ್ದ. ಈ ಭೇಟಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2023ರ ಆಗಸ್ಟ್‌ನಲ್ಲಿ ಚಿನ್ನಯ್ಯ, ತನ್ನ ಪತ್ನಿ ಜೊತೆ ತಿಮರೋಡಿ ಮನೆಗೆ ಭೇಟಿ ನೀಡಿದ್ದ. ಸೌಜನ್ಯಳ ಮಾವ ವಿಠಲ ಗೌಡ ಆತನನ್ನು ತಿಮರೋಡಿ ಮನೆಗೆ ಕರೆದುಕೊಂಡು ಹೋಗಿದ್ದ. ಭೇಟಿ ವೇಳೆ ಚಿನ್ನಯ್ಯ ಶವಗಳನ್ನು ಹೂತ ಬಗ್ಗೆ ತಿಮರೋಡಿಗೆ ಮಾಹಿತಿ ನೀಡಿದ್ದ.
‘ನಾನು ಗುಂಡಿ ತೆಗೆದು ಹೆಣ ಹೂಳುತ್ತಿದ್ದೆ. ಒಂದು ಹೆಣ ಹೂಳುವಾಗ ಡಾಕ್ಟರ್ ಇರಲಿಲ್ಲ. ಕಾಂಪೌಂಡರ್ ಮರಣೋತ್ತರ ಪರೀಕ್ಷೆ ನಡೆಸಿದ್ದ. ಅಲ್ಲಿಗೆ ಪೊಲೀಸರು ಯಾರೂ ಬರೋದಿಲ್ಲ. ಹೆಣ ಹೂಳುವಾಗ ಯಾವ ಸಂಪ್ರದಾಯವನ್ನೂ ಪಾಲಿಸುತ್ತಿರಲಿಲ್ಲ. ನನ್ನಷ್ಟಕ್ಕೆ ನಾನು ಹೆಣ ಹೂತು ಬರಬೇಕು ಅಷ್ಟೇ. ನನ್ನ ಕೈಯಲ್ಲೇ ಎರಡು ಹೆಣ ಕೊಯಿಸಿದ್ರು. ನಾನು ಅಷ್ಟು ವರ್ಷ ಕೆಲಸ ಮಾಡಿದ್ದಕ್ಕೆ ಧರ್ಮಸ್ಥಳದವರು ಸುಮಾರು ₹3 ಲಕ್ಷಕ್ಕೂ ಹೆಚ್ಚು ಹಣ ಕೊಡಬೇಕಿತ್ತು. ಆದರೆ, ಸ್ವಲ್ಪಮಾತ್ರ ಕೊಟ್ಟು ಕಳಿಸಿದ್ರು. ಸೌಜನ್ಯ ವಿಚಾರ ಮಾತನಾಡುತ್ತೇವೆ ಎಂದು ನಮ್ಮನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ರು’ ಎಂದು ಚಿನ್ನಯ್ಯ ಹೇಳಿದ್ದಾನೆ.