ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯ ಸೇವಾ ಚಟುವಟಿಕೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಶ್ರೀ ಕ್ಷೇತ್ರದ ಬಗ್ಗೆ ನಡೆಸುತ್ತಿರುವ ದುಷ್ಟ ಶಕ್ತಿಗಳ ಅಪಪ್ರಚಾರಕ್ಕೆ ಮನ್ನಣೆ ನೀಡಬಾರದು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಧರ್ಮಸ್ಥಳದ ಬಗ್ಗೆ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದಾರೆ. ಶ್ರೀಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡನೀಯ ಎಂದರು.ಸರ್ಕಾರ ಮಾಡಬೇಕಾದ ಸೇವಾ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ. ಮಹಿಳಾ ಗುಂಪುಗಳ ಕಿರು ಸ್ವ- ಉದ್ಯೋಗಗಳಿಗೆ ಆರ್ಥಿಕ ನೆರವಿನ ಜೊತೆಗೆ ಅಗತ್ಯ ಮಾರ್ಗದರ್ಶನ ಮತ್ತು ಮಾರುಕಟ್ಟೆ ರೂಪಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.
ಕೆರೆಗಳ ಜೀರ್ಣೋದ್ಧಾರ, ದೇವಾಲಯಗಳ ಜೀರ್ಣೊದ್ಧಾರ, ಮದ್ಯವರ್ಜನ ಶಿಬಿರಗಳು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಕಾರ್ಯಕ್ರಮಗಳು, ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ, ನಿರ್ಗತಿಕರಿಗೆ ಮಾಸಿಕ ಒಂದು ಸಾವಿರ ರು. ಮಾಶಾಸನ, ಕಡು ಬಡವರಿಗೆ ವಾತ್ಸಲ್ಯ ಮನೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.ಕೆಲ ಸಮಾಜ ವಿರೋಧಿ ಶಕ್ತಿಗಳು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಲ್ಲದ ಅಪಪ್ರಚಾರ ನಡೆಸಿ ಜನರ ಭಾವನೆಗಳನ್ನು ಕುಂದಿಸುವ ಕೆಲಸ ಮಾಡುತ್ತಿವೆ. ಸರ್ಕಾರದ ಎಸ್.ಐ.ಟಿ ತನಿಖೆಯಿಂದ ಈಗಾಗಲೇ ಸತ್ಯಕ್ಕೆ ಸಾವಿಲ್ಲ ಎನ್ನುವುದು ಬಯಲಿಗೆ ಬಂದಿದೆ. ಸರ್ಕಾರ ಮತ್ತು ಜನರಿಗೆ ಸತ್ಯದ ಅರಿವಾಗಿದೆ ಎಂದು ತಿಳಿಸಿದರು.
ಸಂಸ್ಥೆ ಜಿಲ್ಲಾ ನಿರ್ದೇಶಕ ಎ.ಯೋಗೇಶ್ ಮಾತನಾಡಿ, ಧಾರ್ಮಿಕ ಕೇಂದ್ರವಾಗಿದ್ದ ಧರ್ಮಸ್ಥಳವನ್ನು ಸೇವಾ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ದಂಪತಿಗೆ ಸಲ್ಲುತ್ತದೆ. ಧರ್ಮವನ್ನೂ ಮೀರಿದ ಮಾನವೀಯತೆಯ ತಳಹದಿಯ ಮೇಲೆ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.ರಾಜ್ಯ ಆರ್ ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಆನಂದೇಗೌಡ, ಜನ ಜಾಗೃತಿ ವೇದಿಕೆ ಸದಸ್ಯ ಅಕ್ಕಿಹೆಬ್ಬಾಳು ರಘು, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ ಕಾರಂತ, ಪುರಸಭೆ ಸದಸ್ಯ ಕೆ.ಆರ್.ರವೀಂದ್ರ ಬಾಬು, ಸರ್ಕಾರಿ ಕಾಲೇಜಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಶಿಷ್ಯ ವೇತನ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ಸೇರಿ ಯೋಜನೆ ಸೇವಾ ಪ್ರತಿನಿಧಿಗಳು ಮತ್ತು ಫಲಾನುಭವಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿದ್ದರು.