ಸಕಲೇಶಪುರ ಪಟ್ಟಣದ ಮೂಲಕ ಹಾದುಹೋಗಿರುವ ಬಿಎಂ ರಸ್ತೆ ಕಿರಿದಾಗಿರುವುದರಿಂದ ದಿನೇದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡೆತಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣದ ಅಗತ್ಯತೆ, ಯೋಜನೆಯ ವ್ಯಾಪ್ತಿ, ಅಗತ್ಯ ಭೂಸ್ವಾಧೀನ, ಕಾನೂನು ಅಡಚಣೆಗಳು, ಪರಿಹಾರ ವಿತರಣೆಯ ಕ್ರಮ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಕನಿಷ್ಠಗೊಳಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ರಸ್ತೆ ಅಗಲೀಕರಣದಿಂದ ಸಂಚಾರ ಸುಗಮವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಸಾರ್ವಜನಿಕ ಸುರಕ್ಷತೆಗೂ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಬಿಎಂ ರಸ್ತೆ ಅಗಲೀಕರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಕುರಿತು ಶಾಸಕ ಸಿಮೆಂಟ್ ಮಂಜು ಅವರು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರೊಂದಿಗೆ ಸಭೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ರಸ್ತೆ ಅಗಲೀಕರಣದ ಕುರಿತು ಚರ್ಚಿಸಿದರು.ಪಟ್ಟಣದ ಮೂಲಕ ಹಾದುಹೋಗಿರುವ ಬಿಎಂ ರಸ್ತೆ ಕಿರಿದಾಗಿರುವುದರಿಂದ ದಿನೇದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡೆತಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣದ ಅಗತ್ಯತೆ, ಯೋಜನೆಯ ವ್ಯಾಪ್ತಿ, ಅಗತ್ಯ ಭೂಸ್ವಾಧೀನ, ಕಾನೂನು ಅಡಚಣೆಗಳು, ಪರಿಹಾರ ವಿತರಣೆಯ ಕ್ರಮ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಕನಿಷ್ಠಗೊಳಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ರಸ್ತೆ ಅಗಲೀಕರಣದಿಂದ ಸಂಚಾರ ಸುಗಮವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಸಾರ್ವಜನಿಕ ಸುರಕ್ಷತೆಗೂ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೊಂದಿರುವ ಬಿಎಂ ರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಅನಿವಾರ್ಯವಾಗಿದ್ದು, ಈ ದಿಕ್ಕಿನಲ್ಲಿ ಮತ್ತೆ ಚಟುವಟಿಕೆ ಆರಂಭವಾಗಿದೆ.ಸುಮಾರು ಏಳು ವರ್ಷಗಳ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಲಕ್ಷ್ಮೀ ಕಾಂತ್ ರೆಡ್ಡಿ ಅವರ ಮುಂದಾಳತ್ವದಲ್ಲಿ ಬಿಎಂ ರಸ್ತೆ – ಸಕಲೇಶಪುರ ಸ್ವಾಮಿ ದೇವಸ್ಥಾನದಿಂದ ಬಿಎಂ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಜಾಗದಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಕೆಲವು ಖಾಸಗಿ ಕಟ್ಟಡ ಮಾಲೀಕರು ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿಂದ ಯೋಜನೆ ಮಧ್ಯದಲ್ಲೇ ಸ್ಥಗಿತಗೊಂಡಿತ್ತು. ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಗಲೀಕರಣಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಆಗಿನ ಸಚಿವರಾದ ಎಚ್.ಡಿ. ರೇವಣ್ಣ ಅವರು ಸಹ ಅಧಿಕಾರಿಗಳಿಗೆ ಬೆಂಬಲವಾಗಿ ನಿಂತಿದ್ದರು.ಸುಮಾರು ಆರು, ಏಳು ವರ್ಷಗಳ ಬಳಿಕ ಮತ್ತೆ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಶಾಸಕ ಸಿಮೆಂಟ್ ಮಂಜು ಅವರ ಮುಂದಾಳತ್ವದಲ್ಲಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಚುರುಕು ನೀಡಲಾಗಿದೆ. ಈ ಭಾಗದ ಕೆಲ ವ್ಯಾಪಾರಿಗಳನ್ನು ಹೊರತುಪಡಿಸಿ ತಾಲೂಕಿನ ಬಹುತೇಕ ಸಾರ್ವಜನಿಕರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳ ಪ್ರಮುಖ ರಸ್ತೆಗಳು ಈಗಾಗಲೇ ಅಗಲೀಕರಣಗೊಂಡಿರುವುದರಿಂದ, ಸಕಲೇಶಪುರದಲ್ಲೂ ಇದೇ ರೀತಿಯ ಅಭಿವೃದ್ಧಿ ಅಗತ್ಯವೆಂಬ ಒತ್ತಾಯ ಕೇಳಿಬರುತ್ತಿದೆ.ಶೀಘ್ರದಲ್ಲೇ ಸಮಗ್ರ ವರದಿ ಸಿದ್ಧಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಉಪವಿಭಾಗಾಧಿಕಾರಿ ಮಂಜುನಾಥ್, ಪುರಸಭಾ ಮುಖ್ಯ ಅಧಿಕಾರಿ ಮಹೇಶ್ವರಪ್ಪ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.