ಹಾಸನ: ಈ ಹಿಂದೆ ಕಾಂಗ್ರೆಸಿನಲ್ಲಿದ್ದು, ನಂತರ ಬಿಜೆಪಿಗೆ ಬಂದು ಇದೀಗ ಪಕ್ಷಾತೀತವಾಗಿ ಎಲ್ಲರ ಮೇಲೂ ಆರೋಪಗಳನ್ನು ಮಾಡುತ್ತಿರುವ ಹಾಲಿ ಬಿಜೆಪಿ ಮುಖಂಡ ಹಾಗೂ ವಕೀಲರೂ ಆಗಿರುವ ದೇವರಾಜೇಗೌಡರ ಭಾವಚಿತ್ರಗಳನ್ನು ಬೀದಿ ನಾಯಿಗಳಿಗೆ ನೇತುಹಾಕಿ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಕೇಸಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದ ವಕೀಲ ದೇವರಾಜೇಗೌಡ ಅವರು ಹಿಂದಿನಿಂದಲೂ ಸಾಕಷ್ಟು ಪತ್ರಿಕಾಗೋಷ್ಠಿಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಈ ಪತ್ರಿಕಾಗೋ಼ಷ್ಠಿಗಳಲ್ಲಿ ಎಚ್‌.ಡಿ. ರೇವಣ್ಣ ಕುಟುಂಬ ಸೇರಿದಂತೆ ಎಲ್ಲಾ ಪಕ್ಷದವರ ಮೇಲೂ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಅಂತೆಯೇ ಕೆಲ ದಿನಗಳಿಂದೀಚೆಗೆ ಮಾಜಿ ಶಾಸಕ ಪ್ರೀತಂ ಗೌಡ ಅವರ ಮೇಲೆಯೂ ಸಾಕಷ್ಟು ವಾಗ್ದಾಳಿ ನಡೆಸಿದ್ದರು. ಅವರಿಗೆ ಮುಂದಿನ ಚುನಾವಣೆಯಲ್ಲಿ ಹಾಸನದಿಂದ ಟಿಕೆಟ್‌ ನೀಡದಂತೆಯೂ ಒತ್ತಾಯಿಸಿದ್ದರು. ಆ ನಂತರದಲ್ಲಿ ಜೆಡಿಎಸ್‌ ನಾಯಕಿ ಅನ್ನಪೂರ್ಣ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಅವರು ಬೇರೊಬ್ಬ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆಡಿಯೋ ಪ್ರದರ್ಶಿಸಿದ್ದರು. ಇದಕ್ಕೆ ಅನ್ನಪೂರ್ಣಮ್ಮ ಕೂಡ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಪ್ರತಿ ಚಾಟಿ ಬೀಸಿದ್ದಾರೆ.

ಒಟ್ಟಾರೆ ಪರಸ್ಪರ ಕೆಸರೆರೆಚಾಟಗಳು ನಡೆಯುತ್ತಲೇ ಇರುವಾಗ ನಗರದಲ್ಲಿ ಕೆಲ ಬೀದಿನಾಯಿಗಳ ಕೊರಳಲ್ಲಿ ದೇವರಾಜೇಗೌಡ ಅವರ ಫೋಟೋಗಳು ನೇತಾಡುತ್ತಿರುವುದು ಕಂಡುಬಂದಿದೆ. ಇದನ್ನು ಕೆಲವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳಾಗುವ ಲಕ್ಷಣಗಳು ಕಂಡುಬರುತ್ತಿವೆ.