ಸಾರಾಂಶ
ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸುತ್ತಿರುವ ತಲೆಬುರುಡೆ ಪತ್ತೆ ಕಾರ್ಯಾಚರಣೆ ಎರಡನೇ ದಿನವಾದ ಗುರುವಾರ ಮುಕ್ತಾಯಗೊಂಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು/ ಬೆಳ್ತಂಗಡಿ
ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸುತ್ತಿರುವ ತಲೆಬುರುಡೆ ಪತ್ತೆ ಕಾರ್ಯಾಚರಣೆ ಎರಡನೇ ದಿನವಾದ ಗುರುವಾರ ಮುಕ್ತಾಯಗೊಂಡಿದೆ. ಗುರುವಾರ ಕೂಡ ಎರಡು ತಲೆಬುರುಡೆ ಹಾಗೂ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಹೀಗಾಗಿ, ಕಳೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಮಾನವ ತಲೆ ಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾದಂತಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್ಐಟಿ ರವಾನಿಸಲಿದೆ.ತಲೆಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಸಹಚರ, ಸೌಜನ್ಯ ಮಾವ ವಿಠಲ ಗೌಡ ಸೂಚಿಸಿದ ಮೇರೆಗೆ ಎಸ್ಐಟಿ ತಂಡ ಬಂಗ್ಲೆಗುಡ್ಡದಲ್ಲಿ ಅನಾಥ ಶವಗಳ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಮೊದಲ ದಿನ ಐದು ತಲೆಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿತ್ತು. ಸುಮಾರು 12 ಎಕರೆ ವಿಸ್ತೀರ್ಣದ ಅರಣ್ಯಪ್ರದೇಶದಲ್ಲಿ ಐದು ಎಕರೆಯಲ್ಲಿ ಶೋಧ ಕಾರ್ಯವನ್ನು ಬುಧವಾರ ರಾತ್ರಿವರೆಗೂ ಎಸ್‌ಐಟಿ ನಡೆಸಿತ್ತು. ಉಳಿದ ಪ್ರದೇಶವನ್ನು ಗುರುವಾರ ಎಸ್ಐಟಿ ಮುಂದುವರಿಸಿತ್ತು.
ಗುರುವಾರ ಮೂರು ಗಂಟೆಗಳ ಶೋಧ ಕಾರ್ಯಾಚರಣೆ ನಡೆಸಿ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳಿಸಲಾಯಿತು. ಪತ್ತೆಯಾದ ತಲೆಬುರುಡೆ ಮತ್ತು ಮಾನವನ ಅಸ್ಥಿಪಂಜರವನ್ನು ಪ್ಲಾಸ್ಟಿಕ್ ಡಬ್ಬ ಹಾಗೂ ಪೈಪ್‌ಗಳಲ್ಲಿ ತುಂಬಿಸಿ ಎಸ್‌ಐಟಿ ತಂಡ ತೆಗೆದುಕೊಂಡಿದೆ. ವಾಕಿಂಗ್ ಸ್ಟಿಕ್ ಸಹಿತ ಸ್ಥಳದಲ್ಲಿ ಸಿಕ್ಕಿದ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲಲ್ಲಿ ಹರಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು, ಬುರುಡೆ ಹಾಗೂ ಅಸ್ಥಿಪಂಜರ ದೊರೆತ ಸ್ಥಳಗಳನ್ನು ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದಾರೆ. ಮಾರ್ಕಿಂಗ್ ಮಾಡಿರುವ ಸ್ಥಳಗಳನ್ನು ಸೀಲ್ ಮಾಡಲಾಗಿದ್ದು, ಮಹಜರು ಪ್ರಕ್ರಿಯೆ ಮುಗಿಸಿ ಎಲ್ಲ ಅವಶೇಷಗಳನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ.ಪುರುಷರ ಅಸ್ಥಿಪಂಜರ?:
ಇದುವರೆಗೆ ಪತ್ತೆಯಾಗಿರುವ ಎಲ್ಲ ಬುರುಡೆ ಹಾಗು ಮೂಳೆಗಳು ಮೇಲ್ನೋಟಕ್ಕೆ ಪುರುಷರದ್ದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕವೇ ನಿಜ ಸಂಗತಿ ಗೊತ್ತಾಗಲಿದೆ ಎಂದು ಎಸ್‌ಐಟಿ ತಂಡದಲ್ಲಿದ್ದ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಅಸ್ಥಿಪಂಜರಗಳು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ತಲೆ ಬುರುಡೆ ಹಾಗೂ ಅವಶೇಷಗಳು ಪತ್ತೆಯಾದ ಸ್ಥಳಗಳಲ್ಲಿ ಹಗ್ಗ, ಬಟ್ಟೆ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿವೆ.ಓರ್ವನ ಗುರುತು ಪತ್ತೆ?:
ಬುಧವಾರ ಎಸ್ಐಟಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಒಬ್ಬ ಪುರುಷನ ಅಸ್ಥಿಪಂಜರದ ಗುರುತನ್ನು ಸ್ಥಳದಲ್ಲಿ ದೊರೆತ ಐಡಿ ಕಾರ್ಡ್ ಮೂಲಕ ಪತ್ತೆ ಮಾಡಲಾಗಿದೆ. ಕೊಡಗು ಮೂಲದ ಅಯ್ಯಪ್ಪ ಎಂಬುವರಿಗೆ ಸೇರಿದ ಐಡಿ ಕಾರ್ಡ್ ಅದಾಗಿದೆ. ಅವರು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದವರಾಗಿದ್ದು, ಏಳು ವರ್ಷಗಳ ಹಿಂದೆ ಮೈಸೂರಿಗೆ ಹೋದವರು ನಾಪತ್ತೆಯಾದ ಬಗ್ಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.