ಸಾರಾಂಶ
- ಚಿನ್ನಯ್ಯ ಸುಳ್ಳು ಹೇಳಿದ್ದು ತನಿಖೆಯಲ್ಲಿ ಪತ್ತೆ- ಈ ಪಿತೂರಿ ಏಕೆ ಎಂಬುದು ಪತ್ತೆ ಆಗಬೇಕು
===ಕನ್ನಡಪ್ರಭ ವಾರ್ತೆ ಬೆಂಗಳೂರು
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ಸಂಬಂಧ ಮೂಲ ದೂರುದಾರ ಚಿನ್ನಯ್ಯ ಸಾಕಷ್ಟು ಸುಳ್ಳು ಹೇಳಿರುವುದು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಅರ್ಥವಾಗಿದೆ. ಇದರ ಹಿಂದೆ ಷಡ್ಯಂತ್ರ ಇದ್ದು, ಯಾವ ಕಾರಣಕ್ಕಾಗಿ ಮಾಡಲಾಯಿತು ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ.ಧರ್ಮಸ್ಥಳದಲ್ಲಿ ತಾವು ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸಲು ಎಸ್‌ಐಟಿಗೆ ಸೂಚನೆ ನೀಡಬೇಕು ಎಂದು ಕೋರಿ ಧರ್ಮಸ್ಥಳ ಗ್ರಾಮದ ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಸರ್ಕಾರದ (ಎಸ್‌ಐಟಿ) ಪರ ವಾದ ಮಂಡಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಈ ವಿಷಯ ತಿಳಿಸಿದರು.
ಕೆಲ ಸಮಯ ಅರ್ಜಿದಾರರ ಮತ್ತು ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿ ಮೂಲ ದೂರುದಾರನಾಗಿದ್ದ ಸಿ.ಎನ್.ಚಿನ್ನಯ್ಯ ಆರೋಪಿಯಾಗಿದ್ದಾರೆ. ಹಾಗಾಗಿ, ಆತನ ಬಳಿಯಿದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿ/ದಾಖಲೆಯಿದ್ದಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಸೂಚಿಸಿ ಸೆ.26ಕ್ಕೆ ವಿಚಾರಣೆ ಮುಂದೂಡಿತು.ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಗುರುತಿಸಿರುವ ಸ್ಥಳಗಳಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿದರೆ ಡಜನ್‌ಗಟ್ಟಲೆ ಅಸ್ಥಿಗಳು ದೊರೆಯಲಿವೆ. ಅರ್ಜಿ ಹಿಂದಿನ ವಿಚಾರಣೆ ವೇಳೆ ಪ್ರಕರಣದ ಕುರಿತು ಎಸ್‌ಐಟಿಯಿಂದ ಅಗತ್ಯ ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯ ಸೂಚಿಸಿತ್ತು. ಸದ್ಯ ಅವರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ ಎಂದು ನುಡಿದರು.
ಆಗ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್, ಅರ್ಜಿದಾರರು ತಾವು ಗುರುತಿಸಿದ ಸ್ಥಳಗಳಲ್ಲಿ ಉತ್ಖನನ ನಡೆಸುವಂತೆ ಎಸ್‌ಐಟಿಯನ್ನು ಕೋರಿದ್ದ ಪ್ರಕರಣ ಇದಾಗಿದೆ. ಈ ಸಂಬಂಧ ಈ ಎರಡು ಮನವಿ ಸಲ್ಲಿಸಲಾಗಿದೆ. ಈ ಮನವಿಗಳು ಮೂಲ ದೂರುದಾರ ಚಿನ್ನಯ್ಯ ನೀಡಿದ ಹೇಳಿಕೆ ಆಧರಿಸಿದೆ. ಹಾಲಿ ಅರ್ಜಿದಾರರ ಮನವಿಯು ಚಿನ್ನಯ್ಯನ ಜೊತೆಗಿನ ಸಂಭಾಷಣೆಯ ಭಾಗ ಎಂದು ಮಾಹಿತಿ ನೀಡಿದರು.ಚಿನ್ನಯ್ಯ ಶ್ರೀಕ್ಷೇತ್ರ ಧರ್ಮಸ್ಥಳ ಆಡಳಿತ ಸೂಚನೆ ಮೇರೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರು ಮತ್ತು ಶಾಲಾ ಮಕ್ಕಳ ದೇಹಗಳನ್ನು ಹೂತಿದ್ದಾಗಿ ಹೇಳಿದ್ದ. ನಂತರ ಚಿನ್ನಯ್ಯನೇ ಗುರುತಿಸಿದ್ದ 13 ಸ್ಥಳಗಳಲ್ಲಿ ಎಸ್‌ಐಟಿ ಶೋಧ ನಡೆಸಿತು. ಆ.13 ಸ್ಥಳಗಳ ಪೈಕಿ ಒಂದು ಸ್ಥಳದಲ್ಲಿ ವ್ಯಕ್ತಿಯೊಬ್ಬರ ಅಸ್ಥಿ ಪತ್ತೆಯಾಗಿತ್ತು. ಮತ್ತೊಂದು ಸ್ಥಳದಲ್ಲಿ ಎರಡನೇ ಅಸ್ಥಿ ಪತ್ತೆಯಾಗಿತ್ತು. ಅದೂ ಮಹಿಳೆಯ ಶವವಾಗಿರಲಿಲ್ಲ. ದೂರು ನೀಡಿದ್ದಾಗ ಪೊಲೀಸರಿಗೆ ತಾನು ಒಪ್ಪಿಸಿದ್ದ ತಲೆಬರುಡೆ ಮಹಿಳೆಯದ್ದು ಎಂದು ಚಿನ್ನಯ್ಯನೇ ಹೇಳಿದ್ದ. ಆದರೆ, ಆ ತಲೆಬುರುಡೆ ಮಹಿಳೆಯದ್ದಲ್ಲ; 30 ವರ್ಷದ ಪುರುಷನದ್ದಿರಬಹುದು ಎಂದು ಎಫ್‌ಎಸ್‌ಎಲ್ ವರದಿ ಹೇಳಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸದ್ಯ ನಡೆದಿರುವ ತನಿಖೆ ಪ್ರಕಾರ ಚಿನ್ನಯ್ಯ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ಎಸ್‌ಐಟಿಗೆ ಅರ್ಥವಾಗಿತ್ತು. ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ತಾನು ಹೂತಿರುವ ಶವಗಳನ್ನು ಪೊಲೀಸರು, ವೈದ್ಯರು ಪರಿಶೀಲಿಸಿದ್ದರು. 2024ರಲ್ಲಿ ಜೀವಭಯದಿಂದ ಧರ್ಮಸ್ಥಳ ತೊರೆದಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದರೆ, ದಾಖಲೆ ಪರಿಶೀಲಿಸಿದಾಗ ಆತ ಎರಡು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ. ಇನ್ನೂ ಪೊಲೀಸರಿಗೆ ಒಪ್ಪಿಸಿರುವ ತಲೆಬರುಡೆ ತಾನು ಪತ್ತೆ ಮಾಡಿಲ್ಲ. ಇನ್ನಿತರ ಇಬ್ಬರು ತನಗೆ ನೀಡಿದ್ದರು. ಅವರ ಸೂಚನೆ ಮೇರೆಗೆ ಎಲ್ಲ ಹೇಳಿಕೆ ನೀಡಿದ್ದಾಗಿ ಈಗ ಚಿನ್ನಯ್ಯ ಒಪ್ಪಿಕೊಂಡಿದ್ದಾನೆ. ಹಾಗಾಗಿ, ಎಸ್‌ಐಟಿ ಸದ್ಯ ಈ ಪಿತೂರಿಯ ಭಾಗವನ್ನು ಪತ್ತೆ ಮಾಡಬೇಕಿದೆ. ಪಿತೂರಿ ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿಯಬೇಕಿದೆ ಎಂದು ಹೇಳಿದರು.ಆಗ ಪೀಠವು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ, ಚಿನ್ನಯ್ಯನ ಬಳಿಯಿರುವ ಮಾಹಿತಿಗಿಂತ ನಿಮ್ಮ ಬಳಿ ಹೆಚ್ಚಿನ ಸ್ವತಂತ್ರ ಮಾಹಿತಿ ಇದ್ದರೆ ಅದನ್ನು ಪರಿಗಣಿಸಬಹುದಿತ್ತು. ನಿಮ್ಮ ಮನವಿ ಪರಿಗಣಿಸಿದರೆ ನಾಳೆ ಬೇರೆ ಯಾರೋ ಬಂದು, ಶವಗಳನ್ನು ಹೂತಿರುವುದನ್ನು ನೋಡಿದ್ದೇವೆ ಎಂದು ಹೇಳಬಹುದು. ಅದಕ್ಕೆ ಕೊನೆ-ಮೊದಲೇ ಇರುವುದಿಲ್ಲ ಎಂದು ನುಡಿಯಿತು.
ಫೋಟೋ ಸಲ್ಲಿಸ್ತೇವೆ:ಅರ್ಜಿದಾರರ ಪರ ವಕೀಲರು ಉತ್ತರಿಸಿ, ಚಿನ್ನಯ್ಯ 13 ಸ್ಥಳ ಗುರುತಿಸಿದ್ದ. ನಾವು ಅದಕ್ಕಿಂತ ಹೆಚ್ಚಿನ ಸ್ಥಳ ಗುರುತಿಸುತ್ತೇವೆ. ಆ ಸಂಬಂಧ ನಮ್ಮ ಬಳಿ ಫೋಟೋಗಳಿವೆ. ನ್ಯಾಯಾಲಯ ಬಯಸಿದರೆ ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಅಂಶ ಪರಿಗಣಿಸಿದ ಪೀಠ, ಚಿನ್ನಯ್ಯನ ಬಳಿಯಿದ್ದ ಮಾಹಿತಿಗಿಂತ ಹೆಚ್ಚಿನ ಹಾಗೂ ಸ್ವತಂತ್ರವಾದ ಮಾಹಿತಿ ಅರ್ಜಿದಾರರ ಬಳಿ ಇದ್ದರೆ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.