ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಸೆ.22ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖವೇ ಕೆಲ ಸಚಿವರು ಸಮೀಕ್ಷೆ ವಿರುದ್ಧ ಭಾವೋದ್ವೇಗದಲ್ಲಿ ಮಾತನಾಡಿದ್ದಲ್ಲದೆ ಸಮೀಕ್ಷೆಯನ್ನೇ ನಡೆಸದಂತೆ ಆಗ್ರಹಿಸಿದರು ಎನ್ನಲಾಗಿದೆ.ಇದರ ಬೆನ್ನಲ್ಲೇ ಕೆಲ ಸಚಿವರು ಸಮೀಕ್ಷೆ ಪರ ವಾದ ಮಂಡಿಸಿದ್ದು, ಪರಿಣಾಮ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಪರ-ವಿರೋಧದ ಚರ್ಚೆಗಳು ತಾರಕಕ್ಕೇರಿ ಬಿರುಸಿನ ಮಾತಿನ ಚಕಮಕಿಯೂ ನಡೆಯಿತು ಎನ್ನಲಾಗಿದೆ.
ಜಾತಿ ಸಮೀಕ್ಷೆ ಕಾಂಗ್ರೆಸ್‌ಗೆ ಕಂಟಕ:ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿ ಕೆಲ ಸದಸ್ಯರು ಸಮೀಕ್ಷೆಯನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಿದರು. ಸಚಿವ ಎಂ.ಬಿ.ಪಾಟೀಲ್ ಅವರೂ ಭಾವೋದ್ವೇಗದಲ್ಲಿ ಮಾತನಾಡಿ, ಹಾಲಿ ಸ್ವರೂಪದಲ್ಲಿ ಸಮೀಕ್ಷೆ ನಡೆಸುವುದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಸಮೀಕ್ಷೆ ಕುರಿತು ಎಲ್ಲಾ ಜಾತಿಗಳಲ್ಲೂ ತೀವ್ರ ಗೊಂದಲವಿದೆ. ರಾಜ್ಯದ ಜಾತಿ ಪಟ್ಟಿಯಲ್ಲಿ ಇಲ್ಲದ 331 ಹೊಸ ಜಾತಿಗಳನ್ನು ಸೇರ್ಪಡೆ ಮಾಡಿದ್ದು, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದೆಲ್ಲ ಸೇರಿಸಲಾಗಿದೆ. ಜತೆಗೆ ಲಿಂಗಾಯತರಲ್ಲಿ ಯಾವ ಧರ್ಮ ನಮೂದಿಸಬೇಕು ಎಂಬ ಕುರಿತು ಗೊಂದಲ ಉಂಟಾಗಿದ್ದು, ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಗೊಂದಲ ಬಗೆಹರಿಸುವವರೆಗೂ ಸಮೀಕ್ಷೆಗೆ ಮುಂದಾಗಬಾರದು. ಒಂದೊಮ್ಮೆ ಮುಂದಾದರೆ ಮತ್ತೊಮ್ಮೆ ಜಾತಿ ಸಮೀಕ್ಷೆ ಕಾಂಗ್ರೆಸ್‌ಗೆ ಕಂಟಕವಾಗಲಿದೆ ಎಂದು ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.ಈ ವೇಳೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿಲುವನ್ನು ಸಮರ್ಥಿಸಿ ಸಂತೋಷ್ ಲಾಡ್, ಬೈರತಿ ಸುರೇಶ್, ಹಾಗೂ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಸಂತೋಷ್ ಲಾಡ್ ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ವಾಗ್ದಾನ ನೀಡಿತ್ತು. ಹೈಕಮಾಂಡ್ ಸಹ ಸೂಚನೆ ನೀಡಿದೆ. ಹೀಗಾಗಿ ಕೆಲ ಸಣ್ಣ ಪುಟ್ಟ ಗೊಂದಲಗಳಿದ್ದರೂ ಬಗೆಹರಿಸಿ ಸಮೀಕ್ಷೆ ನಡೆಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು ಎನ್ನಲಾಗಿದೆ.
ಎಂ.ಬಿ.ಪಾಟೀಲ್ ಆಕ್ರೋಶ:ಈ ವೇಳೆ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸರ್ಕಾರ ಜನಪರ ಕಾರ್ಯ ಮಾಡುತ್ತಿದ್ದರೂ ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿದೆ. 331 ಹೊಸ ಜಾತಿಗಳನ್ನು ಸೇರ್ಪಡೆ ಮಾಡುವ ಮೂಲಕ ಜಾತಿಗಳಲ್ಲಿ ಒಡಕು ಮೂಡಿಸಿದಂತಾಗಿದೆ. ಮುಖ್ಯವಾಗಿ ಲಿಂಗಾಯತರಲ್ಲಿ ತೀವ್ರ ಗೊಂದಲ ಮೂಡಿದ್ದು, ಇದು ಇದೇ ರೀತಿ ಮುಂದುವರೆದರೆ ಪಕ್ಷದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಗೊಂದಲ ಬಗೆಹರಿಸದ ಹೊರತು ಯಾವುದೇ ಕಾರಣಕ್ಕೂ ಸಮೀಕ್ಷೆ ಮುಂದುವರೆಸಬಾರದು ಎಂದು ಏರು ಧ್ವನಿಯಲ್ಲೇ ನಿಲುವು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ವಿರೋಧಕ್ಕೆ ದನಿಗೂಡಿಸಿದ ಡಿಕೆಶಿ:ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸಮೀಕ್ಷೆ ವಿರೋಧಿಸಿ ಮಾತನಾಡಿದರು. ಸಮೀಕ್ಷೆಯಿಂದ ಜಾತಿಗಳಲ್ಲಿ ತೀವ್ರ ಗೊಂದಲಗಳು ಉಂಟಾಗುತ್ತಿವೆ. ಈಗಾಗಲೇ ಒಂದು ಚುನಾವಣೆಯಲ್ಲಿ ಜಾತಿಗಣತಿಯ ಪೆಟ್ಟು ತಿಂದಿದ್ದೇವೆ. ಈಗಲೂ ಅದೇ ರೀತಿಯ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಹೀಗಾಗಿ ಜಾತಿ, ಧರ್ಮಗಳ ಪಟ್ಟಿಯಲ್ಲಿನ ಗೊಂದಲ ಬಗೆಹರಿಯುವವರೆಗೂ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ನಿಲುವು ತಿಳಿಸಿದರು.
ಇದೇ ವೇಳೆ ಸಮೀಕ್ಷೆಯು ಕಾಂಗ್ರೆಸ್‌ಗೆ ಮತ್ತೊಮ್ಮೆ ಕಂಟಕವಾಗಲಿದೆ ಎಂದು ಕೆಲ ಸಂಪುಟ ಸದಸ್ಯರು ವಾದ ಮಂಡಿಸಿದರೆ, ಕೆಲ ಸದಸ್ಯರು ಇದು ಹೈಕಮಾಂಡ್ ಹಾಗೂ ಪಕ್ಷ ನೀಡಿರುವ ವಾಗ್ದಾನ. ಗೊಂದಲಗಳಿದ್ದರೆ ಬಗೆಹರಿಸಿ ಇದನ್ನು ಮಾಡಬೇಕು. ಈ ವೇಳೆ ಪರಸ್ಪರ ಬಿರುಸಿನ ಮಾತು ವಿನಮಯವಾಗಿ ಚರ್ಚೆಯ ಬಿಸಿ ತಾರಕಕ್ಕೇರಿತ್ತು ಎಂದು ತಿಳಿದುಬಂದಿದೆ.ಮೇಲ್ವರ್ಗದ ವಿರುದ್ಧ ಎಂಬಹಣೆಪಟ್ಟಿ ಕಟ್ಟುತ್ತಿದ್ದೀರಾ?: ಕಿಡಿ
ಸಮೀಕ್ಷೆಯ ವಿರುದ್ಧ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನಗೆ ಮೇಲ್ವರ್ಗಗಳ ವಿರುದ್ಧ ಎಂಬ ಹಣೆಪಟ್ಟಿ ಕಟ್ಟುತ್ತಿದ್ದೀರಾ? ಎಂದು ಗರಂ ಆದ ಪ್ರಸಂಗವೂ ನಡೆದಿರುವುದಾಗಿ ತಿಳಿದುಬಂದಿದೆ.ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅರಿಯಲು ಸಮೀಕ್ಷೆಗೆ ನಿರ್ಧರಿಸಲಾಗಿದೆ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಕೇವಲ ಎಸ್ಸಿ,ಎಸ್ಟಿ, ಓಬಿಸಿ, ಅಲ್ಪಸಂಖ್ಯಾತರ ಪರ ಎಂಬ ಹಣೆಪಟ್ಟಿ ಕಟ್ಟಿದಂತಿದೆ. ನಾನು ಶೋಷಿತರ ಪರ. ಮೇಲ್ವರ್ಗ ಸೇರಿ ಎಲ್ಲಾ ಜಾತಿಗಳಲ್ಲಿನ ಬಡವರನ್ನೂ ಗುರುತಿಸಿ ನ್ಯಾಯ ಒದಗಿಸಬೇಕಾಗಿದೆ. ಇದನ್ನು ಹೇಗೆ ಮಾಡಬೇಕೆಂಬ ಬಗ್ಗೆ ಪುನರ್ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಹಿರಿಯ ಸಚಿವರಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.