ಸಮೀಕ್ಷೆ ವೇಳೆ ಬೈಲಪತರ್ ಎಂದು ನಮೂದಿಸಿ

| Published : Sep 19 2025, 01:00 AM IST

ಸಾರಾಂಶ

ರಾಜ್ಯ ಬೈಲಪತರ್ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ್ ಮನವಿ । 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಬೈಲಪತರ್ ಸಮುದಾಯದವರು ಜಾತಿ ಕಾಲಂನಲ್ಲಿ ಬೈಲಪತರ್ (BAILA PATAR) ಎಂದು ನಮೂದಿಸುವಂತೆ ರಾಜ್ಯ ಬೈಲಪತರ್ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ್ ಬೈಲಪತ್ತರ್ ಕೋರಿದ್ದಾರೆ.

ಬೆಂಗಳೂರು, ಮೈಸೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೆಳಗಾವಿ, ಧಾರವಾಡ, ಗದಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇರುವ ಸಮಸ್ತ ಬೈಲಪತರ್ ಜಾತಿಯವರು ಸೆ.22 ರಿಂದ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಹೆಸರನ್ನು ಬೈಲಪತರ್ (BAILA PATAR) ಎಂದು ನಮೂದಿಸಬೇಕು ಎಂದು ತಿಳಿಸಿದ್ದಾರೆ.

ಸಮೀಕ್ಷಾ ಪ್ರಶ್ನಾವಳಿಯ ಕ್ರಮಸಂಖ್ಯೆ 8ರ ಕಾಲಂನಲ್ಲಿ ಧರ್ಮ ಎನ್ನುವುದಕ್ಕೆ ‘ಹಿಂದೂ ಎಂತಲೂ ಪ್ರಶ್ನೆ ಕ್ರಮ ಸಂಖ್ಯೆ 9 ಜಾತಿ ಕಾಲಂನಲ್ಲಿ ಬೈಲಪತರ್ (BAILA PATAR) ಎಂದು ನಮೂದಿಸಬೇಕು. ಪ್ರಶ್ನೆ ಕ್ರಮ ಸಂಖ್ಯೆ 10 ಯಾವುದೇ ಉಪಜಾತಿ ಇಲ್ಲ ಎಂದು ಬರೆಸಬೇಕು.

ಸಾಮಾಜಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗ 1565 ಜಾತಿಗಳ ಪಟ್ಟಿ ರಚಿಸಿದೆ.

ಈ ಪಟ್ಟಿಯ ಕ್ರಮಸಂಖ್ಯೆ 101ರಲ್ಲಿ ಬೈಲಪತರ್ (BAILA PATAR) ಎಂದು ಜಾತಿ ಹೆಸರು ಸ್ಪಷ್ಟವಾಗಿದೆ. ಸದ್ಯ ಬೈಲಪತರ್ ಜಾತಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ-1 ಪಟ್ಟಿಯಲಿದೆ. ಇದರೊಂದಿಗೆ ಸರ್ಕಾರ ಬೈಲಪತರ್ ಜಾತಿಯನ್ನು ಅಲೆಮಾರಿ-ಅರೆ ಅಲೆಮಾರಿ ಜಾತಿ ಪಟ್ಟಿಯಲ್ಲಿಯೂ ಗುರುತಿಸಿದೆ. ಸಮೀಕ್ಷಾ ಪ್ರಶ್ನಾವಳಿ ಕ್ರಮ ಸಂಖ್ಯೆ 11ರಲ್ಲಿ ಬೈಲಪತರ್ ಜಾತಿಗೆ ಇರುವ ಪರ್ಯಾಯ ಹೆಸರುಗಳನ್ನು 1565 ಜಾತಿಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 99) ಬೈಲ ಅಕ್ಕಸಾಲಿ, ಬೈಲ ಅಕ್ಕಸಾಲಿ 100) ಬೈಲ್ ಪತ್ತಾರ್, ಬೈಲ ಪತ್ತಾರ್ 101) ಬೈಲ್ ಪತರ್, 102)ಬೈಲು ಅಕ್ಕಸಾಲಿ 105) ಬೈಟ್ ಕುಮುಸುಲ 157) ಬಯಲು ಅಕ್ಕಸಾಲಿಗ 158) ಬಯಲು ಪತ್ತರ್ ಎಂದು ಸಮೀಕ್ಷಾ ಪ್ರತಿನಿಧಿಗಳಿಗೆ ತಿಳಿಸಬೇಕು.

ರಾಜ್ಯದಲ್ಲಿ ಬೈಲಪತರ್ ಜಾತಿ ಜನಸಂಖ್ಯೆ ಅತ್ಯಂತ ಕಡಿಮೆ ಇದ್ದು, ಸಾಂಸ್ಕೃತಿಕ ಇತರೆ ಜಾತಿಗಳಿಂತ ಭಿನ್ನವಾಗಿದೆ. ಮಾತೃ ಭಾಷೆ ಒರಿಯಾ ಮೂಲದ ಲಿಪಿ ಇಲ್ಲದ ‘ಜಗನ್ನಾಥಿ’ ಭಾಷೆಯಾಗಿದೆ. ಇದನ್ನು ಸಹ ಸಮೀಕ್ಷಾ ಪ್ರಶ್ನಾವಳಿಯ ಸಂಖ್ಯೆ 15 ಉತ್ತರಿಸುವಾಗ ಸಮೀಕ್ಷಾ ಪ್ರತಿನಿಧಿಗಳಿಗೆ ಸ್ಪಷ್ಟವಾಗಿ ಹೇಳಬೇಕು.

ಕುಲಕಸುಬಿನ ಬಗೆಗಿನ ಪ್ರಶ್ನಾವಳಿ ಸಂಖ್ಯೆ 30ಕ್ಕೆ ಉತ್ತರಗಳ ಆಯ್ಕೆಗೆ ಕ್ರಮ ಸಂಖ್ಯೆ 81ರ ಇತರೆ ಕಸುಬಿನ ಅಡಿ ಕಬ್ಬಿಣ, ತಾಮ್ರ, ಹಿತ್ತಾಳೆ, ಕಲ್ಲುಬೆಳ್ಳಿಯಿಂದ ಕಿರು ಆಭರಣಗಳ ತಯಾರಿಕೆ ಮತ್ತು ರಿಪೇರಿಯ ಬೈಲ ಪತ್ತಾರಿಕೆ ವೃತ್ತಿ ಮಾಡುವುದಾಗಿ ಉತ್ತರಿಸಬೇಕು ಎಂದು ಪ್ರಕಾಶ್ ಬೈಲಪತ್ತರ್ ಮನವಿ ಮಾಡಿದ್ದಾರೆ.